'ಮಹಾ' ಸರ್ಕಾರ ರಚನೆ: ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ನೀಲನಕ್ಷೆ ಬಗ್ಗೆ ಚರ್ಚೆ
ನವ ದೆಹಲಿ, ನವೆಂಬರ್ 21: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಕಾಲ ಸನ್ನಿಹಿತವಾಗಿದ್ದು ಈ ಬಗ್ಗೆ ಕಾಂಗ್ರೆಸ್ ಮತ್ತು ಎನ್ ಸಿಪಿ ಪಕ್ಷದ ಹಿರಿಯ ನಾಯಕರು ಮಂಗಳವಾರ ನವದೆಹಲಿಯಲ್ಲಿ ಶರದ್ ಪವಾರ್ ನಿವಾಸದಲ್ಲಿ ಮಾತುಕತೆ ನಡೆಸಿದರು. ಶಿವಸೇನೆ ನೇತೃತ್ವದಲ್ಲಿ ಸರ್ಕಾರ ರಚನೆಯಾದರೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಮೈತ್ರಿ ಸರ್ಕಾರದ ನೀಲನಕ್ಷೆಯನ್ನು ತಯಾರಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಗೆ ವಹಿಸಲಾಗಿದೆ. ಕಾಂಗ್ರೆಸ್ ಮತ್ತು ಎನ್ ಸಿಪಿ ಪಕ್ಷಗಳು ಚುನಾವಣೆ ಸಮಯದಲ್ಲಿ ನೀಡಿದ್ದ ಪ್ರಣಾಳಿಕೆಯ ಭರವಸೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಕಾರ್ಯಸೂಚಿಗಳನ್ನು ಅಂತಿಮಗೊಳಿಸುತ್ತಿದ್ದಾರೆ.
ಈ ಸಭೆಯು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ನಿವಾಸದಲ್ಲಿ ನಡೆಯಿತು, ಕಾಂಗ್ರೆಸ್ ಮುಖಂಡರಾದ ಅಹ್ಮದ್ ಪಟೇಲ್, ಜೈರಾಮ್ ರಮೇಶ್, ಮಲ್ಲಿಕಾರ್ಜುನ್ ಖರ್ಗೆ, ಪೃಥ್ವಿರಾಜ್ ಚೌವಾಣ್, ಕೆ.ಸಿ.ವೇಣುಗೋಪಾಲ್ ಮತ್ತಿತರರು ಭಾಗವಹಿಸಿದ್ದರು. ಎನ್ ಸಿಪಿ ಮುಖಂಡರಾದ ಸುಪ್ರಿಯಾ ಸುಳೇ, ಅಜಿತ್ ಪವಾರ್, ಜಯಂತ್ ಪಾಟೀಲ್ ನವಾಬ್ ಮಲ್ಲಿಕ್ ಇದ್ದರು.

ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಸರ್ಕಾರ ರಚಿಸಲು ಪ್ರಭಾರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ತಾತ್ವಿಕ ಒಪ್ಪಿಗೆ ಕೊಟ್ಟಿದ್ದಾರೆ. ಶರದ್ ಪವಾರ್ ಅವರೊಂದಿಗಿನ ಸಭೆಯಲ್ಲಿ ಮೈತ್ರಿ ಸರ್ಕಾರಕ್ಕೆ ಹಸಿರು ನಿಶಾನೆ ತೋರಿದ್ದಾರೆ.












Click it and Unblock the Notifications