ಕೇಜ್ರಿವಾಲ್ ವಿರುದ್ಧ ಕಿರಣ್ ಬೇಡಿ ಬಿಜೆಪಿ ಅಭ್ಯರ್ಥಿ?
ನವದೆಹಲಿ, ಮಾರ್ಚ್ 3-ಅರವಿಂದ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಕಟ್ಟಿದಾಗಿನಿಂದ ಲಾಗಾಯ್ತು ಅವರನ್ನು ವಿರೋಧಿಸುತ್ತಾ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದ ಮಾಜಿ ಐಪಿಎಸ್ ಕಿರಣ್ ಬೇಡಿ ಅವರು ಕೇಜ್ರಿವಾಲ್ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮಾತುಗಳು ಕೇಳಿಬಂದಿವೆ.
ಇಡೀ ದೇಶ ಈಗ ಚುನಾವಣಾ ವಾರದಲ್ಲಿದ್ದು, ಇನ್ನೇನು ಇದೇ ಗುರುವಾರದಂದು ಮುಂದಿನ ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆಯಿದೆ. ಹಾಗಾಗಿ, ರಾಜಕೀಯ ಪಕ್ಷಗಳು ತನ್ನ ಅಭ್ಯರ್ಥಿಗಳ ಆಯ್ಕೆಗೆ ಬಗ್ಗೆ ಹೆಚ್ಚು ಹೆಚ್ಚು ಚಿಂತನೆ ನಡೆಸಲಾರಂಭಿಸಿವೆ.

ಅರವಿಂದ ಕೇಜ್ರಿವಾಲ್ ಅವರನ್ನು ರಾಜಕೀಯವಾಗಿ ಕಟ್ಟಿಹಾಕಲು ಯತ್ನಿಸುತ್ತಿರುವ ಬಿಜೆಪಿ ಅವರು ದಿಲ್ಲಿಯಿಂದ ಸ್ಪರ್ಧಿಸುವಂತಿದ್ದರೆ ಅವರ ವಿರುದ್ಧ ಕಿರಣ್ ಬೇಡಿ ಅವರನ್ನು ಕಿಣಕ್ಕಿಳಿಸಲು ಆಲೋಚಿಸುತ್ತಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಅಂದಹಾಗೆ, ಅರವಿಂದ ಕೇಜ್ರಿವಾಲ್ ಮತ್ತು ಕಿರಣ್ ಬೇಡಿ ಇಬ್ಬರೂ ಭ್ರಷ್ಟಾಚಾರ ವಿರೋಧಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಚಿಂತಕರ ಚಾವಡಿಯಲ್ಲಿದ್ದವರು.
ಅಣ್ಣಾರ ಚಿಂತನಗಳಿಗೆ ವಿರುದ್ಧವಾಗಿ ರಾಜಕೀಯ ಪಕ್ಷ ಹುಟ್ಟುಹಾಕಿ, ಕೊನೆಗೆ ದಿಲ್ಲಿ ಮುಖ್ಯಮಂತ್ರಿಯೂ ಆದ ಕೇಜ್ರಿವಾಲಾರನ್ನು ಮತ್ತು ಅವರ ಸುಪ್ತ ರಾಜಕೀಯ ಆಕಾಂಕ್ಷೆಗಳನ್ನು ಕಿರಣ್ ಬೇಡಿ ಆರಂಭದಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಅನೇಕ ವೇಳೆ ಟ್ವಿಟ್ಟರ್ ಮುಖಾಂತರ ಕಿರಣ್, ಮೋದಿಗೆ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ, ಕೇಜ್ರಿವಾಲ್ ವಿರುದ್ಧ ಲೋಕ ಚುನಾವಣೆಯಲ್ಲಿ ಕಿರಣ್ ಬೇಡಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಕೇಜ್ರಿವಾಲಾ ಅನನನುಭವಿ. AAPಗೆ ಮತ ನೀಡುವುದು ಅಂದರೆ ಅದು ಕಾಂಗ್ರೆಸ್ಸಿಗೆ ಮತ ಹಾಕಿದಂತೆಯೇ. ದಿಲ್ಲಿಯಲ್ಲಾದಂತೆ ಕೇಂದ್ರ ಸರಕಾರ ರಚನೆ ವೇಳೆಯೂ ಆಮ್ ಆದ್ಮಿ ಪಕ್ಷ ಅಪಕ್ವತೆ ತೋರಿದರೆ...? ಆದ್ದರಿಂದ ಮೋದಿ ಅವರನ್ನು ಬೆಂಬಲಿಸುವುದು ಜಾಣ್ಮೆಯ ನಡೆ. ಕಾಂಗ್ರೆಸ್ ಮತ್ತು ಆಪ್ ಪಕ್ಷಗಳಿಂದ ದೇಶವನ್ನು ರಕ್ಷಿಸಬೇಕಾಗಿದೆ ಎಂದು ಕಿರಣ್ ಬೇಡಿ ಹೇಳಿದ್ದಾರೆ.


Click it and Unblock the Notifications
