ಮೋದಿ ಬೆಂಬಲಕ್ಕೆ ಪಾಸ್ವಾನ್: ನಿತೀಶ್ ಗೆ ಭಾರಿ ಹೊಡೆತ
ನವದೆಹಲಿ, ಫೆ.24-ಭಾರತದ ಚುನಾವಣಾ ಇತಿಹಾಸದಲ್ಲಿ ಗಿನ್ನಿಸ್ ದಾಖಲೆಗಳ ಸರದಾರರಾಗಿರುವ ಆದರೆ ಇತ್ತೀಚಿನ ದಿನಗಳಲ್ಲಿ ಜನಮಾನದಿಂದ ಕಾಣೆಯಾಗಿರುವ ಲೋಕ ಜನಶಕ್ತಿ ಪಕ್ಷದ ಅಧಿನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ, ಬಿಜೆಪಿ ತೆಕ್ಕೆಗೆ ಸೇರ್ಪಡೆಯಾಗುತ್ತಿದೆ.
ಇತ್ತ ಬಿಜೆಪಿಯೂ ಮಿತ್ರ ಪಕ್ಷಗಳೊಂದಿಗೆ ಚುನಾವಣೆ ಪೂರ್ವ ಹೊಂದಾಣಿಕೆಗೆ ಮುಂದಾಗಿದ್ದು ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷ (LJP) ಮತ್ತು ರಾಷ್ಟ್ರೀಯ ಲೋಕ ಸಮತಾ ಪಾರ್ಟಿ (RLSP) ಜತೆ ಮೈತ್ರಿ ಮಾಡಿಕೊಳ್ಳುವುದು ಅಖೈರಾಗಿದೆ. ಈ ಸಂಬಂಧ ನಿನ್ನೆ ನವದೆಹಲಿಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರ ನಿವಾಸದಲ್ಲಿ ಸಭೆ ಸೇರಿದ್ದ ಪಕ್ಷದ ಮುಖಂಡರುಗಳು ಅಂತಿಮ ತೀರ್ಮಾನ ತೆಗೆದುಕೊಂಡಿದ್ದಾರೆ.

ಇದರಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಭಾರಿ ಹೊಡೆತವಾಗುವ ಸಾಧ್ಯತೆಯಿದೆ. LJP ಮತ್ತು RLSP ಮುಖಂಡರು ಬಿಹಾರದಲ್ಲಿನ ಮೈತ್ರಿಯನ್ನು ಖಚಿತಪಡಿಸಿದ್ದು, ಶೀಘ್ರವೇ ಮೂರೂ ಪಕ್ಷಗಳ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಫಲಿತಾಂಶ ಹೇಗಿತ್ತು ಎಂಬುದು ಗಮನಾರ್ಹವಾಗಿದೆ: 40 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ 2004ರ ಚುನಾವಣೆಯಲ್ಲಿ LJP, RJD ಮತ್ತು Congress ಮೈತ್ರಿ ಮಾಡಿಕೊಂಡು 29 ಕ್ಷೇತ್ರಗಳಲ್ಲಿ ಗೆಲುವ ಕಂಡಿದ್ದವು.
ಅದೇ 2009ರ ವೇಳೆಗೆ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. RJD-4, Congress-2 ಸ್ಥಾನಗಳಲ್ಲಿ ಗೆದ್ದಿದ್ದರೆ LJP ಸಾಧನೆ ಶೂನ್ಯವಾಗಿತ್ತು. ಸ್ವಕ್ಷೇತ್ರ ಹಾಜಿಪುರದಲ್ಲಿ ಸ್ವತಃ ರಾಮ್ ವಿಲಾಸ್ ಪಾಸ್ವಾನ್ ಸೋಲುಂಡಿದ್ದರು. ಇದೀಗ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಸಹ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ.
2002ರ ಗೋಧ್ರ ಗಲಭೆಗಳನ್ನು ಖಂಡಿಸಿ, ರಾಮ್ ವಿಲಾಸ್ ಪಾಸ್ವಾನ್ ಅವರು NDA ತೊರೆದಿದ್ದರು. ಹಾಗಾಗಿ, ಈಗ ನರೇಂದ್ರ ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿರುವುದನ್ನು ಒಪ್ಪಿ, ಪಾಸ್ವಾನ್ ಅವರು ಬಿಜೆಪಿಯನ್ನು ಬೆಂಬಲಿಸುತ್ತಾರಾ? ಎಂಬ ಪ್ರಶ್ನೆಗೆ ನ್ಯಾಯಾಲಯದಲ್ಲಿ ಮೋದಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಹಾಗಾಗಿ ಮೋದಿ ವಿರುದ್ಧ ಯಾರದೇ ತಕರಾರು ಇಲ್ಲ ಎಂದು LJP ಸಂಸದೀಯ ಮಂಡಳಿ ಸದಸ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications