ಭಾರತ, ಅಮೆರಿಕದಂಥ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕಿದೆ; ಬ್ಲಿಂಕನ್
ನವದೆಹಲಿ, ಜುಲೈ 28: "ಪ್ರಜಾಪ್ರಭುತ್ವ ಮತ್ತು ಮೂಲ ಸ್ವಾತಂತ್ರ್ಯಕ್ಕೆ ಜಾಗತಿಕ ಬೆದರಿಕೆಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಭಾರತ ಮತ್ತು ಅಮೆರಿಕದಂಥ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕು" ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಬುಧವಾರ ಹೇಳಿದ್ದಾರೆ.
ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ಲಿಂಕನ್ ಅವರು ಬುಧವಾರ ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಜೊತೆ ಸಮಾಲೋಚನೆ ನಡೆಸಿದರು.
"ಸಮಾನ, ಅಂತರ್ಗತ ಹಾಗೂ ಸುಸ್ಥಿರ ಬೆಳವಣಿಗೆ" ವಿಷಯದ ಕುರಿತು ದುಂಡುಮೇಜಿನ ಸಭೆಯಲ್ಲಿ ಭಾರತೀಯ ಸಿವಿಲ್ ಸೊಸೈಟಿ ಸದಸ್ಯರೊಂದಿಗೆ ಮಾತನಾಡಿದ ಬ್ಲಿಂಕನ್, "ಪ್ರಜಾಪ್ರಭುತ್ವವನ್ನು ಹೆಚ್ಚು ಮುಕ್ತ, ಅಂತರ್ಗತ ಹಾಗೂ ನ್ಯಾಯಸಮ್ಮತವಾಗಿಸಲು ಭಾರತ ಹಾಗೂ ಅಮೆರಿಕ ಎರಡೂ ದೇಶಗಳಿಗೆ ನಾಗರಿಕ ಸಮಾಜದ ಬೆಂಬಲ ಅಗತ್ಯವಿದೆ" ಎಂದು ಹೇಳಿದರು.

"ಭಾರತ ಹಾಗೂ ಅಮೆರಿಕ ಎರಡೂ ದೇಶಗಳು ಮೂಲ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ ಒಟ್ಟಾಗಿ ಮುನ್ನಡೆಯಬೇಕು. ಇದು ಸವಾಲಿನ ಕೆಲಸವೂ ಹೌದು" ಎಂದರು.
ಬ್ಲಿಂಕನ್ ಭೇಟಿಯೊಂದಿಗೆ ಅಮೆರಿಕ, ಭಾರತದೊಂದಿಗೆ ಮಾನವ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ವಿಷಯ ಪ್ರಸ್ತಾಪಿಸುವ ಉದ್ದೇಶ ಹೊಂದಿದೆ. ಕಾಶ್ಮೀರದ ಸ್ಥಿತಿಗತಿ ಹಾಗೂ ದೆಹಲಿಯಲ್ಲಿನ ರೈತರ ಚಳವಳಿ ಕುರಿತು ಈಚೆಗೆ ಅಮೆರಿಕ ಮಾತನಾಡಿತ್ತು.












Click it and Unblock the Notifications