ಬಿಜೆಪಿ ಮೇಲೆ ಅಮೆರಿಕಾ ಬೇಹುಗಾರಿಕೆ ಮಾಡಿದೆಯಂತೆ!
ನವದೆಹಲಿ, ಜು. 2 : ಅಮೆರಿಕಾದ ಬೇಹುಗಾರಿಕೆ ಸಂಸ್ಥೆ ಎನ್‌ಎಸ್ಎ ಬಿಜೆಪಿ ಚಟುವಟಿಕೆ ಮೇಲೆ ನಾಲ್ಕು ವರ್ಷಗಳಿಂದ ಕಣ್ಣಿಟ್ಟಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಬಿಜೆಪಿ ಸೇರಿ ಆರು ವಿದೇಶಿ ರಾಜಕೀಯ ಪಕ್ಷಗಳ ಕುರಿತು ಎನ್ಎಸ್‌ಎ ಕಣ್ಗಾವಲು ಇಟ್ಟಿತ್ತು. ಭಾರತ ಸೇರಿ 193 ರಾಷ್ಟ್ರಗಳ ಸರ್ಕಾರಗಳ ಕಾರ್ಯವೈಖರಿ ಕುರಿತೂ ಬೇಹುಗಾರಿಕೆ ನಡೆಸಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಅಮೆರಿಕಾದ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಎ) ಮಾಜಿ ಉದ್ಯೋಗಿ ಎಡ್ವರ್ಡ್ ಸ್ನೋಡೆನ್ ಈ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಸ್ವತಃ ಅಮೆರಿಕಾದ ಅಧ್ಯಕ್ಷ ಬಾರಕ್ ಒಬಾಮ ಬೇಹುಗಾರಿಕೆ ನಡೆಸಲು ಆದೇಶ ನೀಡಿದ್ದರು. ಅದರಂತೆ ಕಾನೂನು ಪ್ರಕಾರ 2010ರಲ್ಲಿ ವಾಷಿಂಗ್ಟನ್ ವಿದೇಶಿ ಬೇಹುಗಾರಿಕೆ ನ್ಯಾಯಾಲಯದ ಅನುಮತಿ ಪಡೆದು ಬೇಹುಗಾರಿಕೆ ನಡೆಸಲಾಗಿದೆ ಎಂದು ಸ್ನೋಡೆನ್ ಮಾಹಿತಿ ಹೊರಹಾಕಿದ್ದಾರೆ.

ಎನ್‌ಎಸ್‌ಎ ಪಾಕಿಸ್ತಾನದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ, ಲೆಬನಾನ್ ನ ಅಮಾಲ್, ವೆನಿಜುವೆಲಾದ ಬೊಲಿವೆರಿಯನ್ ಕಾಂಟಿನೆಂಟಲ್ ಕೋ ಆರ್ಡಿನೇಟರ್, ಈಜಿಪ್ಟ್‌ನ ಮುಸ್ಲಿಂ ಬ್ರದರ್‌ಹುಡ್ ಮತ್ತು ಈಜಿಪ್ತಿಯನ್ ನ್ಯಾಷನಲ್ ಸಾಲ್ವೇಶನ್ ಫ್ರಂಟ್ ಪಕ್ಷಗಳ ಮೇಲೆ ಬೇಹುಗಾರಿಕೆ ನಡೆಸಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಹೀಗೆ ನಡೆಸಿದ ಬೇಹುಗಾರಿಕೆ ವರದಿಯನ್ನು ಅತ್ಯಂತ ರಹಸ್ಯದ ದಾಖಲೆ ಎಂದು ಪರಿಗಣಿಸಲಾಗುತ್ತದೆ ಮತ್ತು ಅದರ ಪ್ರತಿಯನ್ನು ಅಧ್ಯಕ್ಷ ಬರಾಕ್ ಒಬಾಮ ಮತ್ತು ಉಪಾಧ್ಯಕ್ಷ ಜೊ ಬಿಡೆನ್ ಅವರಿಗೆ ಸಲ್ಲಿಸಲಾಗುತ್ತದೆ ಎಂದು ಎಡ್ವರ್ಡ್ ಸ್ನೋಡೆನ್ ಹೇಳಿದ್ದಾರೆ. ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಐರೋಪ್ಯ ಒಕ್ಕೂಟ, ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ಮೇಲೂ ಬೇಹುಗಾರಿಕೆ ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ : ಬೇಹುಗಾರಿಕೆ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅರವಿಂದ ಗುಪ್ತಾ, ಮೊದಲು ವರದಿಯ ಸತ್ಯಾಸತ್ಯತೆ ಪರಿಶೀಲಿಸುತ್ತೇವೆ. ಈ ಆರೋಪ ನಿಜವಾಗಿದ್ದರೆ, ಇದು ಗಂಭೀರ ವಿಚಾರ. ಸಾರ್ವಭೌಮ ರಾಷ್ಟ್ರವೊಂದರ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಬೇರೊಬ್ಬರು ಮೂಗು ತೂರಿಸುವುದನ್ನು ಸಹಿಸಲಾಗದು. ಭವಿಷ್ಯದಲ್ಲಿ ಇದು ಮರುಕಳಿಸಕೂಡದು. ಸೂಕ್ತ ಪ್ರಾಧಿಕಾರದ ಎದುರು ಪಕ್ಷ ಈ ವಿಚಾರವನ್ನು ಪ್ರಸ್ತಾಪಿಸಲಿದೆ ಎಂದು ಹೇಳಿದ್ದಾರೆ.












Click it and Unblock the Notifications