ಬ್ರಿಟನ್‌ನಿಂದ ಬಂದವರಲ್ಲಿ ಸೋಂಕು; ವಿಮಾನಗಳ ನಿರ್ಬಂಧ ವಿಸ್ತರಣೆ ಸಾಧ್ಯತೆ
ನವದೆಹಲಿ, ಡಿಸೆಂಬರ್ 29: ಬ್ರಿಟನ್ ನಲ್ಲಿ ಈಚೆಗೆ ಕೊರೊನಾ ವೈರಸ್ ರೂಪಾಂತರ ಸೋಂಕು ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೆಲವು ದೇಶಗಳು ತಕ್ಷಣವೇ ಬ್ರಿಟನ್ ನಿಂದ ವಿಮಾನ ಯಾನವನ್ನು ರದ್ದುಗೊಳಿಸಿದ್ದವು.
ಭಾರತ ಕೂಡ ಡಿ.22ರಿಂದಲೇ ಬ್ರಿಟನ್ ನಿಂದ ಬರುವ ವಿಮಾನಗಳನ್ನು ಡಿ.31ರವರೆಗೂ ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಇದೀಗ ಆ ಅವಧಿಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಯಿರುವುದಾಗಿ ತಿಳಿದುಬಂದಿದೆ.
ಬ್ರಿಟಿನ್ ನಿಂದ ಭಾರತಕ್ಕೆ ಮರಳಿದ್ದ ಆರು ಮಂದಿಯಲ್ಲಿ ಮಂಗಳವಾರ ಕೊರೊನಾ ರೂಪಾಂತರ ಸೋಂಕು ಪತ್ತೆಯಾಗಿದ್ದು, ಈ ಬೆಳವಣಿಗೆಯಿಂದ ಭಾರತ-ಬ್ರಿಟನ್ ನಡುವಿನ ವಿಮಾನಗಳ ರದ್ದತಿಯನ್ನು ಇನ್ನಷ್ಟು ಸಮಯ ವಿಸ್ತರಿಸುವುದಾಗಿ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಬ್ರಿಟನ್ -ಭಾರತದ ನಡುವಿನ ವಿಮಾನಗಳ ರದ್ದತಿ ಅವಧಿಯನ್ನು ಇನ್ನಷ್ಟು ವಿಸ್ತರಿಸಲಾಗುವುದು. ಆದರೆ ಇದು ದೀರ್ಘವಾಗಿರುವುದಿಲ್ಲ. ಇನ್ನು ಎರಡು ದಿನಗಳಲ್ಲಿ, ಈ ರೂಪಾಂತರ ಸೋಂಕಿನ ಕುರಿತು ಒಂದು ಚಿತ್ರಣ ಸಿಗುತ್ತಿದ್ದಂತೆ, ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಗುತ್ತದೆ. ಈ ತಾತ್ಕಾಲಿಕ ರದ್ದತಿಯನ್ನು ಯಾವಾಗ ಹಿಂಪಡೆಯಬಹುದು ಎಂಬ ಕುರಿತು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬ್ರಿಟನ್ ನಿಂದ ಮರಳಿದ ಹಲವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಡುತ್ತಿದ್ದು, ರೂಪಾಂತರ ಸೋಂಕಿನ ಜೆನೋಮ್ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಲಾಗುತ್ತಿದೆ.












Click it and Unblock the Notifications