ದೆಹಲಿಯಲ್ಲಿ ದಾಳಿ ನಡೆಸಲು ಸಂಚು; ಇಬ್ಬರು ಶಂಕಿತ ಉಗ್ರರ ಫೋಟೋ ಬಿಡುಗಡೆ
ನವದೆಹಲಿ, ನವೆಂಬರ್ 20 : ಅಮೃತ್ ಸರ್ ಸ್ಫೋಟದ ಎರಡು ದಿನದ ನಂತರ ದೆಹಲಿ ಪೊಲೀಸರು ಮಂಗಳವಾರ ಎರಡು ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಶಂಕಿತರು ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾಗಿದ್ದು, ದೆಹಲಿಯಲ್ಲಿ ದಾಳಿ ನಡೆಸಲು ಸಂಚು ರೂಪಿಸಿರಬಹುದು ಎಂಬ ಗುಮಾನಿ ಇದೆ.
ಗೆಸ್ಟ್ ಹೌಸ್ ಗಳಲ್ಲಿ, ಪೇಯಿಂಗ್ ಗೆಸ್ಟ್ ಅಂತ ಉಳಿದುಕೊಂಡಿರುವ ಸಾಧ್ಯತೆ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಶಂಕಿತರು ತೆಗೆಸಿಕೊಂಡಿರುವ ಫೋಟೊದಲ್ಲಿ ಫಿರೋಜ್ ಪುರ್ 9 ಕಿ.ಮೀ., ದೆಹಲಿ 360 ಕಿ.ಮೀ. ಅಂತಿದೆ. ಫಿರೋಜ್ ಪುರ್ ಎಂಬುದು ಅಮೃತ್ ಸರ್ ಗೆ 133 ಕಿ.ಮೀ. ಇದೆ. ಇದೇ ಸ್ಥಳದಲ್ಲಿ ಎರಡು ಮೋಟಾರ್ ಸೈಕಲ್ ನಲ್ಲಿ ಬಂದ ಯುವಕರು ಭಾನುವಾರ ಗ್ರನೇಡ್ ದಾಳಿ ನಡೆಸಿ, ಮೂವರ ಸಾವಿಗೆ ಹಾಗೂ ಇಪ್ಪತ್ತು ಮಂದಿ ಗಾಯಗೊಳ್ಳಲು ಕಾರಣರಾಗಿದ್ದರು.
ದೆಹಲಿ ನಗರದಾದ್ಯಂತ ಇಬ್ಬರು ಶಂಕಿತರ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ಜತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳನ್ನು ಹಾಕಲಾಗಿದ್ದು, ಇವರಿಬ್ಬರು ಕಂಡುಬಂದಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.

ಈಚೆಗೆ ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಜೈಷ್ ಇ ಮೊಹ್ಮದ್ ನ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನ ಸೋದರ ಸಂಬಂಧಿಯನ್ನು ಕೊಲ್ಲಲಾಗಿತ್ತು. ಅದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಲು ಯೋಜನೆ ರೂಪಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications