ವಾಜಪೇಯಿ ಭಾವಚಿತ್ರದೊಂದಿಗೆ ಬರಲಿದೆ 100 ರೂ. ನಾಣ್ಯ
Recommended Video

ನವದೆಹಲಿ, ಡಿಸೆಂಬರ್ 13: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರವಿರುವ 100 ರೂ. ಮುಖಬೆಲೆಯ ನಾಣ್ಯ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಸರ್ಕಾರದ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
100 ರೂ. ಮುಖಬೆಲೆಯ 35 ಗ್ರಾಂ ತೂಕದ ನಾಣ್ಯದ ಇನ್ನೊಂದು ಬದಿಯಲ್ಲಿ ವಾಜಪೇಯಿ ಅವರ ಭಾವಚಿತ್ರ ಇರಲಿದೆ. ದೇವನಾಗರಿ ಲಿಪಿ ಮತ್ತು ಇಂಗ್ಲಿಷ್‌ನಲ್ಲಿ ಅವರ ಹೆಸರನ್ನು ಮುದ್ರಿಸಲಾಗುತ್ತದೆ. ಭಾವಚಿತ್ರದ ಕೆಳಗೆ ಅವರು ಬದುಕಿನ ಇಸವಿಯಾದ 1924-2018 ಅನ್ನು ಟಂಕಿಸಲಾಗುತ್ತದೆ.
ನಾಣ್ಯದ ಮೇಲ್ಭಾಗದಲ್ಲಿ ಅಶೋಕ ಸ್ಥಂಭದ ಸಿಂಹದ ಲಾಂಛನ ಮತ್ತು ಮಧ್ಯಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ 'ಸತ್ಯಮೇವ ಜಯತೇ' ಸಾಲು ಇರಲಿದೆ.

ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ 'ಭಾರತ್' ಮತ್ತು ಬಲಭಾಗದಲ್ಲಿ ಇಂಗ್ಲಿಷ್‌ನಲ್ಲಿ 'ಇಂಡಿಯಾ' ಎಂದು ಬರೆದಿರುತ್ತದೆ. ಸಿಂಹದ ಲಾಂಛನದ ಕೆಳಗೆ ರೂಪಾಯಿ ಚಿಹ್ನೆ ಹಾಗೂ 100 ರೂ. ಎಂದು ಟಂಕಿಸಿರುತ್ತದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಸ್ಟ್ 16ರಂದು ತಮ್ಮ 93ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು.
ವಾಜಪೇಯಿ ಅವರ ಸ್ಮರಣಾರ್ಥ ಡೆಹರಾಡೂನ್ ವಿಮಾನ ನಿಲ್ದಾಣಕ್ಕೆ ಅಟಲ್‌ಜಿ ಅವರ ಹೆಸರಿಡಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ. ಹಾಗೆಯೇ ಲಕ್ನೋದ ಪ್ರಸಿದ್ಧ ಹಜರತ್ ಗಂಜ್ ಚೌರಾಹಾವನ್ನು 'ಅಟಲ್ ಚೌಕ್' ಎಂದು ಬದಲಿಸಲು ತೀರ್ಮಾನಿಸಲಾಗಿದೆ.












Click it and Unblock the Notifications