ಸಂಸತ್ ನಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮಂಡನೆ
ನವದೆಹಲಿ, ಫೆ.3 : ಬುಧವಾರದಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಮಂಡಿಸುವುದಾಗಿ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಕಮಲ್ ನಾಥ್ ಹೇಳಿದ್ದಾರೆ. ಫೆ.5ರಿಂದ ಸಂಸತ್ ಅಧಿವೇಶನ ಆರಂಭವಾಗುವ ಹಿನ್ನಲೆಯಲ್ಲಿ ಸೋಮವಾರ ಅವರು ವಿಪಕ್ಷಗಳ ಸಭೆ ನಡೆಸಿದರು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಲ್ ನಾಥ್, ಫೆ.5ರಿಂದ ಆರಂಭವಾಗಲಿರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಮಹಿಳಾ ಮೀಸಲಾತಿ ಕಾಯ್ದೆಯನ್ನು ಮಂಡಿಸಲಾಗುವುದು ಎಂದು ಹೇಳಿದರು. ಪ್ರತ್ಯೇಕ ತೆಲಂಗಾಣ ಮಸೂದೆಯನ್ನು ಮಂಡಿಸಲಿದ್ದು, ಎಲ್ಲ ಮಸೂದೆಗೆ ಅನುಮೋದನೆ ನೀಡಲು ವಿಪಕ್ಷಗಳು ಸಹಕರಿಸಬೇಕು ಎಂದರು.

ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ಸಂಸತ್ ನಲ್ಲಿ ಅನುಮೋದನೆ ನೀಡುವ ಮೂಲಕ ಅಧಿವೇಶನವನ್ನು ಐತಿಹಾಸಿಕಗೊಳಿಸಲು ಸರ್ಕಾರ ನಿರ್ಧರಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಲೇಖಾನುದಾನವನ್ನು ಮಂಡಿಸಲಾಗುವುದು ಎಂದು ಕಮಲ್ ನಾಥ್ ತಿಳಿಸಿದರು.
ನಮ್ಮನ್ನು ದೂರಬೇಡಿ : ಸಭೆಯಲ್ಲಿ ಮಾತನಾಡಿದ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಪ್ರತಿಪಕ್ಷ ಬಿಜೆಪಿ ಎರಡು ಮಸೂದೆಗಳಿಗೆ ಅನುಮೋದನೆ ಪಡೆಯಲು ಸರ್ಕಾರಕ್ಕೆ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಸಹಕಾರ ನೀಡಲಿದೆ. ತೆಲಂಗಾಣ ವಿಚಾರದಲ್ಲಿ ನಿಮ್ಮ ಪಕ್ಷದ ಸಂಸದರು ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿಯಾದರೆ ನಮ್ಮನ್ನು ದೂರಬೇಡಿ ಎಂದು ಹೇಳಿದರು.












Click it and Unblock the Notifications