ಭಾರತದಲ್ಲಿ ಹವಾಮಾನ ಮಾಹಿತಿ ಸಂಗ್ರಹಿಸಲು ಶೀಘ್ರ ಡ್ರೋನ್ ಬಳಕೆ
ನವದೆಹಲಿ ಜೂನ್ 8: ಹವಾಮಾನ ಕುರಿತು ಮಾಹಿತಿ ಸಂಗ್ರಹಿಸಲು ಡ್ರೋನ್ ಗಳನ್ನು ನಿಯೋಜಿಸಲು ಭಾರತ ಸಜ್ಜಾಗಿದೆ. ಸದ್ಯ ದೇಶದಾದ್ಯಂತ ಕನಿಷ್ಠ 55 ಸ್ಥಳಗಳಿಂದ ಪ್ರತಿದಿನ ಎರಡು ಬಾರಿ ಬಿಡುಗಡೆ ಮಾಡಲಾದ ಹವಾಮಾನ ಬಲೂನ್ ಗಳ ಮೂಲಕ ಸಂವೇದಕಗಳನ್ನು ಕಳುಹಿಸುವುದರಿಂದ ಮಾಹಿತಿ ಸಂಗ್ರಹಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಡ್ರೋನ್ ಗಳು ಇದಕ್ಕೆ ಸಮರ್ಥ ಪರ್ಯಾಯವಾಗಬಹುದು.
ರೇಡಿಯೊಸಾಂಡ್ ನಲ್ಲಿ ಅಂತರ್ಗತವಾಗಿರುವ ಸಂವೇಕಗಳು ಹವಾಮಾನ ಬಲೂನ್ ಮೂಲಕ ಸಾಗಿಸುವ ಟೆಲಿಮೆಟ್ರಿ ಉಪಕರಣವಾಗಿದ್ದು, ವಾತಾವರಣದ ಒತ್ತಡ, ತಾಪಮಾನ, ಗಾಳಿಯ ದಿಕ್ಕು ಮತ್ತು ವೇಗವನ್ನು ದಾಖಲಿಸುತ್ತದೆ. ಹೈಡ್ರೋಜನ್ ತುಂಬಿದ ಹವಾಮಾನ ಬಲೂನ್ 12 ಕಿ.ಮೀ ಎತ್ತರಕ್ಕೆ ಏರುತ್ತದೆ ಮತ್ತು ರೇಡಿಯೊ ಸಂಕೇತಗಳ ಮೂಲಕ ನೆಲದಲ್ಲಿರುವ ರಿಸೀವರ್‌ಗೆ ಮಾಹಿತಿಯನ್ನು ರವಾನಿಸಲಿದೆ.
ಆದಾಗ್ಯೂ, ಹವಾಮಾನ ಬಲೂನ್ ಗಳು ಮತ್ತು ರೇಡಿಯೊಸಾಂಡ್ ಗಳು ಅವುಗಳನ್ನು ವಾತಾವರಣದಲ್ಲಿ ಬಿಡುಗಡೆ ಮಾಡಿದ ನಂತರ ಹವಾಮಾನ ಕೇಂದ್ರಗಳಿಂದ ದೂರ ಹೋಗುವುದನ್ನು ತಡೆಯಲು ಆಗುವುದಿಲ್ಲ.

"ಹವಾಮಾನ ಮುನ್ಸೂಚನೆಗೆ ನಿರ್ಣಾಯಕವಾಗಿರುವ ವಾತಾವರಣದ ಮಾಹಿತಿಯನ್ನು ಸಂಗ್ರಹಿಸಲು ಡ್ರೋನ್ ಗಳನ್ನು ಬಳಸುವ ಸಾಧ್ಯತೆಗಳ ಬಗ್ಗೆ ನಾವು ಅನ್ವೇಷಿಸುತ್ತಿದ್ದೇವೆ,'' ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್ ಹೇಳಿದರು.
ಹವಾಮಾನ ದತ್ತಾಂಶವನ್ನು ಸಂಗ್ರಹಿಸಲು ಸಂವೇದಕಗಳನ್ನು ಹೊಂದಿರುವ ವಿಶೇಷ ಡ್ರೋನ್ ಗಳು ಹವಾಮಾನ ಬಲೂನ್ ಗಳಿಗೆ ಪರ್ಯಾಯವಾಗಬಹುದು ಎಂದು ಅಧ್ಯಯನಗಳು ತಿಳಿಸಿವೆ.
ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ಹವಾಮಾನ ಕೇಂದ್ರಗಳ ಮೂಲಕ ದೇಶದಾದ್ಯಂತ 550 ಸ್ಥಳಗಳಿಂದ ಹವಾಮಾನ ದತ್ತಾಂಶವನ್ನು ಸಂಗ್ರಹಿಸುತ್ತದೆ.
ಡ್ರೋನ್ ಗಳು ಹವಾಮಾನ್ ಬಲೂನ್ ಗಳಿಗಿಂತ ಹೆಚ್ಚು ಪ್ರಯೋಜನ ಹೊಂದಿವೆ. ಏಕೆಂದರೆ ಡ್ರೋನ್ ಗಳನ್ನು ಕಡಿಮೆ ಎತ್ತರ ಮತ್ತು ಹೆಚ್ಚು ಎತ್ತರದಲ್ಲಿ ಹಾರುವಂತೆ ನಿಯಂತ್ರಿಸಬಹುದು.
ಐದು ಕಿಮೀ ಎತ್ತರದಿಂದ ಮಾಹಿತಿ ಸಂಗ್ರಹಿಸಲು ಡ್ರೋನ್ ಗಳನ್ನು ಬಳಸಲು ಭಾರತೀಯ ಹವಾಮಾನ ಇಲಾಖೆ ಯೋಜಿಸಿದೆ. ಇದನ್ನು ಹವಾಮಾನ್ ಬಲೂನ್ ಗಳನ್ನು ಬಳಸಿಕೊಂಡು ಸಂಗ್ರಹಿಸಿದ ದತ್ತಾಂಶದೊಂದಿಗೆ ಹೋಲಿಸಲಾಗುತ್ತದೆ.

"ಡ್ರೋನ್‌ಗಳು ಸಮರ್ಥ, ಆರ್ಥಿಕವಾಗಿ ಕಾರ್ಯಸಾಧ್ಯ, ಸುಲಭವಾಗಿ ನಿಯೋಜಿಸಬಹುದಾದ ಮತ್ತು ಮೇಲ್ಮಟ್ಟದ ವಾಯುಮಂಡಲದ ಗಡಿ ಪದರದವರೆಗೆ ಮೇಲ್ಮೈ ಗಾಳಿಯ ಪರೀಕ್ಷೆಗಾಗಿ ಪ್ರಸ್ತುತ ನಿಯೋಜಿಸಲಾದ ರೇಡಿಯೊಸಾಂಡ್ ಗಳಿಗಿಂತ ತಾಂತ್ರಿಕವಾಗಿ ಉತ್ತಮವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ" ಎಂದು ಐಎಂಡಿ ತಿಳಿಸಿದೆ.
ಹವಾಮಾನ ಬಲೂನ್‌ನ ಹಾರಾಟವು ಸಾಮಾನ್ಯವಾಗಿ ಎರಡು ಗಂಟೆಗಳವರೆಗೆ ಇರುತ್ತದೆ. ಆದರೆ ಡ್ರೋನ್‌ಗಳನ್ನು ಬಳಸಿಕೊಂಡು 40 ನಿಮಿಷಗಳ ಹಾರಾಟದ ಸಮಯದಲ್ಲಿ ದತ್ತಾಂಶ ಸಂಗ್ರಹಿಸಬಹುದು ಎಂದು ಐಎಂಡಿ ನಿರೀಕ್ಷಿಸಿದೆ.
ಒಮ್ಮೆ ಹವಾಮಾನ ಬಲೂನ್ ಗಳು ಹಾರಾಟದ ನಂತರ ಅವುಗಳನ್ನು ಹಿಂಪಡೆಯಲು ಸಾಧ್ಯವಿಲ್ಲ. ಹಾಗಾಗಿ ಪ್ರತಿದಿನ 100 ಕ್ಕೂ ಹೆಚ್ಚು ರೇಡಿಯೊಸಾಂಡ್ ಗಳು ಕಳೆದು ಹೋಗುತ್ತವೆ. ಡ್ರೋನ್ ಗಳ ಬಳಕೆಯಿಂದ ರೇಡಿಯೊಸಾಂಡ್ ಗಳು ವ್ಯರ್ಥವಾಗುವುದು ಕಡಿಮೆಯಾಗುತ್ತದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications