ತಾಜ್ ಮಹಲ್ ನೋಡಿದ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ನವದೆಹಲಿ, ಫೆಬ್ರವರಿ 24: ಭಾರತಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮಲೆನಿಯಾ ಟ್ರಂಪ್ ಇಂದು ವಿಶ್ವದ ಎಂಟನೇ ಅದ್ಭುತ ತಾಜ್ ಮಹಲ್ ಕಣ್ತುಂಬಿಕೊಂಡರು.
ತಾಜ್ ಮಹಲ್ ನೋಡಿದ ಕೂಡಲೇ ಡೊನಾಲ್ಡ್ ಟ್ರಂಪ್ ಹೇಳಿದ್ದೇನು ಎಂಬುದನ್ನು ತಾಜ್ ಭೇಟಿ ವೇಳೆ ಟ್ರಂಪ್ ದಂಪತಿ ಜೊತೆಗಿದ್ದ ಗೈಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ದಂಪತಿ ತಾಜ್ ಮಹಲ್ ಗೆ ಭೇಟಿ ನೀಡಿದಾಗ ನಿತಿನ್ ಕುಮಾರ್ ಸಿಂಗ್ ಎಂಬ ಪ್ರವಾಸಿ ಮಾರ್ಗದರ್ಶಿ ಟ್ರಂಪ್ ದಂಪತಿಗೆ ತಾಜ್ ಮಹಲ್ ಇತಿಹಾಸ, ಮಹತ್ವ, ವಾಸ್ತುಶಿಲ್ಪ ಇತರ ಮಾಹಿತಿಗಳ ಬಗ್ಗೆ ಮಾಹಿತಿ ನೀಡಿದರು.

''ತಾಜ್ ಮಹಲ್ ಅನ್ನು ಮೊದಲ ಬಾರಿಗೆ ನೋಡಿದಾಗ ಡೊನಾಲ್ಡ್ ಟ್ರಂಪ್ 'ಅತ್ಯದ್ಭುತ' (ಇನ್‌ಕ್ರೆಡಿಬಲ್) ಎಂದರು. ಇದೇ ಅವರ ಬಾಯಿಂದ ಬಂದ ಮೊದಲ ಪದ'' ಎಂದು ಪ್ರವಾಸಿ ಮಾರ್ಗರ್ಶಿ ನಿತಿನ್ ಹೇಳಿದ್ದಾರೆ.
''ತಾಜ್ ಮಹಲ್ ವೀಕ್ಷಿಸಿದ ಪ್ರತಿ ಸೆಕೆಂಡ್ ಸಹ ನಾನು ಅವರಿಗೆ ತಾಜ್ ಮಹಲ್ ಬಗ್ಗೆ ವಿವರಿಸಿದ್ದೇನೆ, ಡೊನಾಲ್ಡ್ ಟ್ರಂಪ್ ದಂಪತಿ ಮತ್ತೊಮ್ಮೆ ಖಂಡಿತವಾಗಿ ತಾಜ್ ಮಹಲ್ ನೋಡಲು ಬರುತ್ತೇವೆಂದು ಹೇಳಿದ್ದಾರೆ' ಎಂದು ನಿತಿನ್ ಹೇಳಿದರು.

ಡೊನಾಲ್ಡ್ ಟ್ರಂಪ್ ಪತ್ನಿ ಮಲೆನಿಯಾ ಟ್ರಂಪ್ ಮಗಳು ಇವಾಂಕಾ ಟ್ರಂಪ್ ಅಳಿಯ ಎಲ್ಲರೂ ಇಂದು ತಾಜ್ ಮಹಲ್ ವೀಕ್ಷಣೆ ಮಾಡಿದರು. ಟ್ರಂಪ್ ಮಗಳು ಇವಾಂಕಾ ತಾಜ್ ಮಹಲ್ ಅನ್ನು ವೀಕ್ಷಿಸಿ ಅಲ್ಲಿಂದಲೇ ವಿಡಿಯೋ ಕಾಲ್ ಮೂಲಕ ಮಕ್ಕಳಿಗೆ ತಾಜ್ ಅನ್ನು ತೋರಿಸಿದರು.












Click it and Unblock the Notifications