ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಗೆ ಭದ್ರತೆ ಹೇಗಿದೆ ಗೊತ್ತಾ?
ನವದೆಹಲಿ, ಸೆಪ್ಟೆಂಬರ್ 16: ನರೇಂದ್ರ ಮೋದಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಬೆನ್ನಿಗೆ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಧಾನಿ ಅಭ್ಯರ್ಥಿ ಮೋದಿಗೆ NSG ವತಿಯಿಂದ 108 ಸಿಬ್ಬಂದಿಯ ಕಾವಲು ಕಲ್ಪಿಸಲಾಗಿದ್ದು, ಮತ್ತಷ್ಟು ಭದ್ರತೆ ಒದಗಿಸಲು NSG ಚಿಂತನೆ ನಡೆಸಿದೆ.
ಬಿಜೆಪಿಯ ಭೀಷ್ಮ ಪಿತಾಮಹ ಅಡ್ವಾಣಿ, ಬಿಎಸ್‌ಪಿ ನಾಯಕಿ ಮಾಯಾವತಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಛತ್ತೀಸ್‌ಗಢ ಸಿಎಂ ರಮಣ ಸಿಂಗ್ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಅಖೀಲೇಶ್ ಯಾದವ್, ಮುಲಾಯಂ ಸಿಂಗ್, ರಾಜನಾಥ್ ಸಿಂಗ್, ಫಾರೂಕ್ ಅಬ್ದುಲ್ಲಾ ಸೇರಿದಂತೆ ಝಡ್ ಪ್ಲಸ್ ಭದ್ರತೆ ಹೊಂದಿರುವ 16 ಗಣ್ಯಾತಿಗಣ್ಯರ ಪೈಕಿ ಮೋದಿಯಷ್ಟು ಭದ್ರತೆ ಯಾರಿಗೂ ಇಲ್ಲ.
ಕಳೆದ ಮೂರು ತಿಂಗಳಲ್ಲಿ ಮೋದಿ ವ್ಯಕ್ತಿತ್ವ/ ಪ್ರಭಾವಳಿ ಅಗಾಧವಾಗಿ ಬೆಳೆದಿರುವುದರಿಂದ ಅವರ ಭದ್ರತೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. SPG ಭದ್ರತೆಯ ನಂತರದ ಅತಿ ಹೆಚ್ಚು ಭದ್ರತಾ ವ್ಯವಸ್ಥೆ ಅಂದರೆ Z+.

ಮೋದಿ ಕಾವಲಿಗೆ 108 NSG ಸಿಬ್ಬಂದಿ
ಜೂನ್ ತಿಂಗಳಲ್ಲಿ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮೋದಿ ನೇಮಕಗೊಂಡಾಗ ಅವರಿಗೆ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ರಾಷ್ಟ್ರೀಯ ಭದ್ರತಾ ಪಡೆಯು 18ರಿಂದ 36ಕ್ಕೆ ಹೆಚ್ಚಳ ಮಾಡಿತ್ತು. ಇದೀಗ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಆ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಮೋದಿ ಅವರು ಪ್ರಯಾಣಿಸುವ ವಾಹನಗಳ ತಪಾಸಣೆ ಸೇರಿದಂತೆ ಮೂರು ಪಾಳಿಗಳಲ್ಲಿ ಒಟ್ಟು 108 NSG ಸಿಬ್ಬಂದಿ ಮೋದಿ ಅವರನ್ನು ಕಾವಲು ಕಾಯುತ್ತಿದ್ದಾರೆ.

ಬಹುತೇಕ ಎಲ್ಲ ಉಗ್ರಗಾಮಿ ಹಿಟ್ ಲಿಸ್ಟ್ ನಲ್ಲಿ ಮೋದಿ
ಝಡ್ ಪ್ಲಸ್ ಭದ್ರತೆಯನ್ನು ಗಣ್ಯರಿಗೆ ನೀಡಿದ್ದರೂ ಬೆದರಿಕೆಯನ್ನು ಆಧರಿಸಿ National Security Guard (NSG) ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ನಿಗದಿ ಮಾಡುತ್ತದೆ. ದೇಶದಲ್ಲಿ ಸಕ್ರಿಯವಾಗಿರುವ ಬಹುತೇಕ ಎಲ್ಲ ಉಗ್ರಗಾಮಿ ಸಂಘಟನೆಗಳ ಹಿಟ್ ಲಿಸ್ಟ್ ನಲ್ಲಿ ಮೋದಿ ಅವರ ಹೆಸರು ಇರುವುದರಿಂದ ಅವರ ಭದ್ರತೆ ಬಗ್ಗೆ ಭದ್ರತಾ ಪಡೆಗಳು ಹೆಚ್ಚಿನ ಮುತುವರ್ಜಿ ವಹಿಸಿವೆ. ಮೋದಿ ಅವರು ಗುಜರಾತ್‌ನಿಂದ ಹೊರಗೆ ಹೋದಾಗಲಂತೂ ಅತಿ ಹೆಚ್ಚು ತಲೆಕೆಡಿಸಿಕೊಳ್ಳುತ್ತವೆ.

ಭಾರತದಲ್ಲಿ ಒಟ್ಟು 4 ಶ್ರೇಣಿಯ ಭದ್ರತಾ ವ್ಯವಸ್ಥೆ
ಭಾರತದಲ್ಲಿ ಒಟ್ಟು 4 ಶ್ರೇಣಿಯ ವೈಯಕ್ತಿಕ ಭದ್ರತಾ ವ್ಯವಸ್ಥೆಗಳಿವೆ. Z+, Z, Y ಮತ್ತು X.
1) Z+ ಶ್ರೇಣಿಯ ಭದ್ರತೆಯನ್ನು 36 ಗಣ್ಯರಿಗೆ ನೀಡಲಾಗಿದೆ.
2) Z ಶ್ರೇಣಿಯ ಭದ್ರತೆಯನ್ನು 22 ಗಣ್ಯರಿಗೆ ನೀಡಲಾಗಿದೆ.
3) Y ಶ್ರೇಣಿಯ ಭದ್ರತೆಯನ್ನು 11 ಗಣ್ಯರಿಗೆ ನೀಡಲಾಗಿದೆ. ಮತ್ತು
4) X ಶ್ರೇಣಿಯ ಭದ್ರತೆಯನ್ನು ಇಬ್ಬರು ಗಣ್ಯರಿಗೆ ನೀಡಲಾಗಿದೆ.

Special Protection Group
NSG ಬಿಟ್ಟರೆ SPG ಎಂಬ Special Protection Group ಎಂಬ ಕಟ್ಟೆಚ್ಚರದ ಭದ್ರತಾ ವ್ಯವಸ್ಥೆ ಅನುಭವಿಸುವ ಗಣ್ಯರೂ ದೇಶದಲ್ಲಿದ್ದಾರೆ. ಅವರೆಂದರೆ ದೇಶದ ಪ್ರಧಾನ ಮಂತ್ರಿ. ಅವರನ್ನು ಬಿಟ್ಟರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರಿಗೆ SPG ಭದ್ರತೆ ಹಾಕಲಾಗಿದೆ.

Z+ ಭದ್ರತಾ ವ್ಯವಸ್ಥೆಯಲ್ಲಿ ಏನಿರುತ್ತದೆ?
Z+ ಭದ್ರತೆ ವ್ಯವಸ್ಥೆಯಲ್ಲಿ 24 ಗಂಟೆಯೂ ಗಣ್ಯವ್ಯಕ್ತಿಗೆ ಭದ್ರತೆ ಕಲ್ಪಿಸಲಾಗುತ್ತದೆ. ಒಂದು ಪೈಲಟ್ ವಾಹನ ಮತ್ತು ಹಿಂಬಾಲಿಸುವ ಒಂದು ವಾಹನ ಕೋಬ್ರಾ ಕಮಾಂಡೋಗಳು ಮತ್ತು 12 ಮಂದಿ ಹೋಮ್ ಗಾರ್ಡ್ಸ್ ಇರುತ್ತಾರೆ.
ಗೃಹ ಸಚಿವಾಲಯದ ತಿಳಿವಳಿಕೆ ಮೇರೆಗೆ Z+ ಭದ್ರತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಸಂಬಂಧಪಟ್ಟ ರಾಜ್ಯ ಸರಕಾರವೂ ಬೆದರಿಕೆಯ ಅಂಶವನ್ನು ಆಧರಿಸಿ ಈ ಭದ್ರತೆಯನ್ನು ಹೆಚ್ಚಿಸಬಹುದು.

ಸಚಿನ್ ತೆಂಡೂಲ್ಕರ್ ಅವರಿಗೂ Z+ security
ಇವೆಲ್ಲಾ ಭದ್ರತೆಗಳು ರಾಜಕಾರಣಿಗಳೇ ಸೀಮಿತ ಇಂದೇನೂ ಇಲ್ಲ. ಕ್ರಿಕೆಟ್ ರಂಗದ ಮಹಾನ್ ಚೇತನ ಸಚಿನ್ ತೆಂಡೂಲ್ಕರ್ ಅವರನ್ನು Z+ securityನಲ್ಲಿ ಕಾಪಿಡಲಾಗುತ್ತಿದೆ. ಜತೆಗೆ ವಿದೇಶಿ ಗಣ್ಯ ಅತಿಥಿಗಳಿಗೂ ಶಿಷ್ಟಾಚಾರದಂತೆ ಇಂತಹುದೇ ಭದ್ರತೆ ಕಲ್ಪಿಸಲಾಗುತ್ತದೆ.
NSG ಭದ್ರತಾ ವ್ಯವಸ್ಥೆಯಲ್ಲಿ 2 ವಿಭಾಗಗಳಿವೆ: Special Action Group ಮತ್ತು Special Rangers Group. SAG ವ್ಯವಸ್ಥೆಯಲ್ಲಿ ಸೇನಾ ಸಿಬ್ಬಂದಿ ಇರುತ್ತಾರೆ. SRG ವ್ಯವಸ್ಥೆಯಲ್ಲಿ ITBP, CISF, CRPF, BSF ಮತ್ತು SSB ಸಿಬ್ಬಂದಿಯಿರುತ್ತಾರೆ. SRG ವ್ಯವಸ್ಥೆಯನ್ನು ಹೈಜಾಕ್ ಕಾರ್ಯಾಚರಣೆ ವೇಳೆ ಬಳಸಲಾಗುತ್ತದೆ.












Click it and Unblock the Notifications