ಸರ್ಕಾರ ರಚನೆಗೆ ಹತ್ತುದಿನ ಟೈಂ ಕೋಡಿ : ಕೇಜ್ರಿವಾಲ್
ನವದೆಹಲಿ, ಡಿ.14 : ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ಅಂತಿಮ ಹಂತ ತಲುಪಿದೆ. ಸರ್ಕಾರ ರಚಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು 10 ದಿನಗಳ ಕಾಲಾವಕಾಶ ನೀಡುವಂತೆ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಲೆಫ್ಟಿನಂಟ್ ಜನರಲ್ ಅವರಿಗೆ ಮನವಿ ಮಾಡಿದ್ದಾರೆ.
ಶನಿವಾರ ಲೆಫ್ಟಿನಂಟ್ ಜನರಲ್ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಜ್ರಿವಾಲ್, ಸರ್ಕಾರ ರಚನೆ ಬಗ್ಗೆ ನಿರ್ಧಾರ ಕೈಗೊಳ್ಳಲು 10 ದಿನಗಳ ಕಾಲಾವಕಾಶ ಕೋರಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ ಬೇಷರತ್ ಬೆಂಬಲ ನೀಡಿದರೆ, ಸರ್ಕಾರ ರಚಿಸುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷ ಆಮ್ ಆದ್ಮಿ ಪಕ್ಷಕ್ಕೆ ಬೇಷರತ್ ಬೆಂಬಲ ನೀಡುತ್ತೇವೆ ತಿಳಿಸಿದ್ದಾರೆ. ಆದರೆ, ನಾವು ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿರಲಿಲ್ಲ. ಈ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದರು. ಕಾಂಗ್ರೆಸ್ ಪಕ್ಷಕ್ಕೆ ದೆಹಲಿ ಜನರ ಬಗ್ಗೆ ಕಾಳಜಿ ಇಲ್ಲ. ನಾವು ಸರ್ಕಾರ ರಚನೆ ಮಾಡುತ್ತೇವೆ. ಆದರೆ, ಕಾಂಗ್ರೆಸ್ ನಮಗೆ ಬೇಷರತ್ ಬೆಂಬಲ ನೀಡಿದರೆ ಮಾತ್ರ ಎಂದರು. (ಕೇಜ್ರಿವಾಲ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರಾ?)
ಈಗಾಗಲೇ ಕಾಂಗ್ರೆಸ್ ಆಮ್ ಆದ್ಮಿ ಪ್ಷಕ ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವುದಾದದರೆ, ನಾವು ಬೆಂಬಲ ನೀಡುತ್ತೇವೆ ಎಂದು ಲೆಫ್ಟಿನಂಟ್ ಜನರಲ್ ನಜೀಬ್ ಜಂಗ್ ಅವರಿಗೆ ಪತ್ರ ಬರೆದಿದೆ. ಆದ್ದರಿಂದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಒಟ್ಟಾಗಿ ದೆಹಲಿಯಲ್ಲಿ ಸರ್ಕಾರ ರಚಿಸುವ ಸಾಧ್ಯತೆ ಇದೆ. ಹತ್ತು ದಿನಗಳಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆ. (ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಿರುಗಿಬಿದ್ದ ಶೀಲಾ)
ಡಿ.8ರಂದು ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ 32, ಎಎಪಿ 28 ಮತ್ತು ಕಾಂಗ್ರೆಸ್ 8 ಸ್ಥಾನಗಳನ್ನು ಪಡೆದಿದ್ದು ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಡಿ.8ರಿಂದಲೇ ದೆಹಲಿ ಗದ್ದುಗೆಯನ್ನು ಯಾರು ಏರುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ. (ಸೋತ-ಗೆದ್ದ ಪ್ರಮುಖರು)












Click it and Unblock the Notifications