ದೆಹಲಿ ಹಿಂಸಾಚಾರ: ಅಮಿತ್ ಶಾ, ಅರವಿಂದ್ ಕೇಜ್ರಿವಾಲ್ ತುರ್ತು ಸಭೆ
ನವದೆಹಲಿ, ಫೆಬ್ರವರಿ 25: ದೆಹಲಿಯಲ್ಲಿ ಹಿಂಸಾಚಾರ ತಾರಕಕ್ಕೇರುತ್ತಿದ್ದು, ಇದುವರೆಗೂ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ. ಈ ನಿಟ್ಟಿನಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತುರ್ತು ಸಭೆ ನಡೆಸುತ್ತಿದ್ದಾರೆ.
Recommended Video
ಈಗಾಗಲೇ ಹತ್ತು ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಾಯ್‌ಜಾಲ್, ಪೊಲೀಸ್ ಆಯುಕ್ತರಾದ ಅಮೂಲ್ಯ ಪಟ್ನಾಯಕ್,ಕಾಂಗ್ರೆಸ್ ಮುಖಂಡ ಸುಭಾಷ್ ಛೋಪ್ರಾ, ಬಿಜೆಪಿ ಮುಖಂಡ ಮನೋಜ್ ತಿವಾರಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರತಿಭಟನೆಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಕಡಿಮೆ ಇದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.ಕಳೆದ ಮೂರು ತಿಂಗಳಿಂದ ಸಿಎಎ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಇದೀಗ ಅದು ಹಿಂಸಾಚಾರದ ಹಂತವನ್ನು ತಲುಪಿದೆ. ಸೋಮವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಹೈಕೋರ್ಟ್ ಹೇಳಿದೆ.

ಜಫ್ರಾಬಾದ್, ಮೌಜ್ ಪುರ್, ಚಾಂದ್ ಬಾಗ್, ಖುರೇಜಿ ಖಾಸ್ ಮತ್ತು ಭಜನ್ ಪುರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಉದ್ರಿಕ್ತರ ಮೇಲೆ ಲಾಠಿಪ್ರಹಾರ ನಡೆಸಿದ್ದು, ಅಶ್ರುವಾಯು ಸಿಡಿಸಿದ್ದಾರೆ.
ಅಗತ್ಯಬಿದ್ದರೆ ಸೇನೆಯನ್ನು ಕೂಡ ನಿಯೋಜಿಸಲಾಗುತ್ತದೆ. ಶೀಘ್ರವೇ ಆ ಸ್ಥಳದಲ್ಲಿ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗುತ್ತದೆ. ಪೊಲೀಸರ ಅಭಾವದಿಂದಲೇ ಇಂತಹ ಘಟನೆ ನಡೆದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.












Click it and Unblock the Notifications