ಮಾಸ್ಕ್ ಧರಿಸದ 4 ಪ್ರಯಾಣಿಕರನ್ನು 'ನೋ-ಫ್ಲೈ' ಪಟ್ಟಿಗೆ ಸೇರಿಸಿದ ಏರ್ ಇಂಡಿಯಾ
ನವದೆಹಲಿ, ಮಾರ್ಚ್ 17: ಕೋವಿಡ್-19 ನಿಯಮಾವಳಿಗಳನ್ನು ಪಾಲಿಸದ ನಾಲ್ವರು ಪ್ರಯಾಣಿಕರನ್ನು ಏರ್ ಇಂಡಿಯಾದ ಪ್ರಾದೇಶದ ಸಂಸ್ಥೆ ಅಲೈಯನ್ಸ್ ಏರ್, 'ನೋ-ಫ್ಲೈ' ಪಟ್ಟಿಗೆ ಸೇರ್ಪಡೆ ಮಾಡಿದೆ. ಜಮ್ಮುವಿನಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಈ ನಾಲ್ವರು ಪ್ರಯಾಣಿಕರು, ಪೈಲಟ್ ಮತ್ತು ವಿಮಾನದ ಸಿಬ್ಬಂದಿ ಹಲವು ಬಾರಿ ಮನವಿ ಮಾಡಿದ್ದರೂ ಮಾಸ್ಕ್ ಧರಿಸಲು ನಿರಾಕರಿಸಿದ್ದರು ಎನ್ನಲಾಗಿದೆ. ಈ ಆರೋಪದಡಿ ಈ ನಾಲ್ವರನ್ನೂ 'ಅಶಿಸ್ತಿನ' ಪ್ರಯಾಣಿಕರು ಎಂದು ಘೋಷಿಸಲಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಈ ನಾಲ್ವರು ಪ್ರಯಾಣಿಕರನ್ನು ಭದ್ರತಾ ಸಂಸ್ಥೆಗಳ ವಶಕ್ಕೆ ಒಪ್ಪಿಸಲಾಗಿದೆ. ಕೋವಿಡ್-19 ಶಿಷ್ಟಾಚಾರಗಳಿಗೆ ಅನುಗುಣವಾಗಿ ಮಾಸ್ಕ್ ಧರಿಸುವಂತೆ ನಾಲ್ವರು ಪ್ರಯಾಣಿಕರಿಗೆ ಪೈಲಟ್ ಕ್ಯಾಪ್ಟನ್ ವಿಕಾಸ್ ತೋಮರ್ ಪದೇ ಪದೇ ಪ್ರಕಟಣೆ ಮೂಲಕ ಮನವಿ ಮಾಡಿದರೂ ಅವರು ಅದಕ್ಕೆ ಕಿವಿಗೊಡಲಿಲ್ಲ. ಹೀಗಾಗಿ ಈ ಕ್ರಮ ತೆಗೆದುಕೊಳ್ಳಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕೆಲವು ದಿನಗಳ ಹಿಂದಷ್ಟೇ ಕೋವಿಡ್ ನಿಯಂತ್ರಣಕ್ಕೆ ಹೊಸ ನಿಯಮಾವಳಿ ಪ್ರಕಟಿಸಿತ್ತು. ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡದ ಜನರಿಗೆ ಎಚ್ಚರಿಕೆ ನೀಡಲಾಗುವುದು. ಆದರೆ ಸತತ ಸೂಚನೆ ಬಳಿಕವೂ ಅದನ್ನು ಪಾಲಿಸದೆ ಇದ್ದರೆ ಅವರನ್ನು ಅಶಿಸ್ತಿನ ಪ್ರಯಾಣಿಕರೆಂದು ಪರಿಗಣಿಸಲಾಗುವುದು ಎಂದು ಹೇಳಿತ್ತು.

'ವಿಮಾನ ಪ್ರಯಾಣ ಮಾಡುತ್ತಿರುವ ಕೆಲವು ಪ್ರಯಾಣಿಕರು 'ಕೋವಿಡ್ 19 ಶಿಷ್ಟಾಚಾರ'ಗಳನ್ನು ಸರಿಯಾಗಿ ಪಾಲಿಸದೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಮಾಸ್ಕ್ ಅನ್ನು ಸರಿಯಾಗಿ ಧರಿಸಬೇಕು. ಮೂಗಿನ ಕೆಳಗೆ ಅಲ್ಲ. ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದಾಗಿನಿಂದ ವಿಮಾನದಿಂದ ಇಳಿದು ಹೊರ ಹೋಗುವವರೆಗೂ ಈ ಶಿಷ್ಟಾಚಾರಗಳನ್ನು ಪಾಲಿಸಬೇಕು' ಎಂದು ಡಿಜಿಸಿಎ ತಿಳಿಸಿತ್ತು.












Click it and Unblock the Notifications