ರಾಜೀನಾಮೆ ಸುದ್ದಿ ತಳ್ಳಿಹಾಕಿದ ಯೋಗೇಂದ್ರ ಯಾದವ್
ನವದೆಹಲಿ, ಮೇ 31 : ಆಮ್ ಆದ್ಮಿ ಪಕ್ಷಕ್ಕೆ ನಾನು ರಾಜೀನಾಮೆ ನೀಡಿದ್ದೇನೆ ಎಂಬ ಗಾಳಿಸುದ್ದಿಗೆ ತಲೆಬುಡವಿಲ್ಲ. ನಾನು ಪಕ್ಷದೊಂದಿಗೇ ಇದ್ದೇನೆ, ಪಕ್ಷಕ್ಕಾಗಿ ಬದ್ಧನಾಗಿದ್ದೇನೆ. ಪಕ್ಷಕ್ಕಾಗಿ ಇನ್ನೂ ಕಠಿಣವಾಗಿ ಕೆಲಸ ಮಾಡಲಿದ್ದೇನೆ ಎಂದು ಯೋಗೇಂದ್ರ ಯಾದವು ಅವರು ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದು, ಗಾಳಿಸುದ್ದಿಯನ್ನು ನಿರಾಕರಿಸಿದ್ದಾರೆ.
Rumours about my quitting AAP are baseless. I am very much with the party and committed to working for it harder than ever.
— Yogendra Yadav (@AapYogendra) May 31, 2014 ಹಿಂದಿನ ಸುದ್ದಿ : ಆಮ್ ಆದ್ಮಿ ಪಕ್ಷ ಎಲ್ಲಾ ಸ್ಥಾನಕ್ಕೆ ಪಕ್ಷದ ಹಿರಿಯ ಮುಖಂಡ ಯೋಗೇಂದ್ರ ಯಾದವ್ ಶನಿವಾರ ರಾಜೀನಾಮೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರವಾಲ್ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ.
ಆಮ್ ಆದ್ಮಿ ಪಕ್ಷದ ಸಂಸ್ಧಾಪಕ ಸದಸ್ಯರಾಗಿದ್ದ ಯೋಗೇಂದ್ರ ಯಾದವ್ ಲೋಕಸಭೆ ಚುನಾವಣೆಗೆ ಹರ್ಯಾಣದ ಗುರ್ಗಾಂವ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದರು ಮಾತ್ರವಲ್ಲದೇ ಕೊನೆಯ ಸ್ಥಾನ ಪಡೆದಿದ್ದರು. ಆದ್ದರಿಂದ ಸೋಲಿನ ನೈತಿಕ ಹೊಣೆ ಹೊತ್ತು ಅವರು, ಪಕ್ಷದ ಎಲ್ಲಾ ಸ್ಥಾನಗಳಿಗೆ ಶನಿವಾರ ರಾಜೀನಾಮೆ ನೀಡಿದ್ದಾರೆ.

ತಮ್ಮ ರಾಜೀನಾಮೆ ಪತ್ರವನ್ನು ಯೋಗೇಂದ್ರ ಯಾದವ್ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಶನಿವಾರ ಸಲ್ಲಿಸಿದ್ದಾರೆ. ಆದರೆ, ಕೇಜ್ರಿವಾಲ್ ಯಾದವ್ ಅವರ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ ಎಂದು ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ನೀರಿಕ್ಷಿಸಲಾಗುತ್ತಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಆಮ್ ಆದ್ಮಿ ಪಕ್ಷ ನಿರೀಕ್ಷಿತ ಯಶಸ್ಸುಗಳಿಸಲು ಸಾಧ್ಯವಾಗಿರಲಿಲ್ಲ. ದೇಶದಲ್ಲಿ ಕೇವಲ ನಾಲ್ಕು ಸ್ಥಾನಗಳಲ್ಲಿ ಪಕ್ಷ ಜಯಗಳಿಸಿತ್ತು. ಸ್ವತಃ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಾರಣಾಸಿಯಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಸೋಲು ಅನುಭವಿಸಿದ್ದರು.
ಚುನಾವಣೆ ಫಲಿತಾಂಶ ಪ್ರಟಕವಾದ ಬಳಿಕ ಆಮ್ ಆದ್ಮಿ ಪಕ್ಷ ದೊಡ್ಡ ಪ್ರಮುಖ ನಾಯಕರು ರಾಜೀನಾಮೆ ನೀಡಲು ಆರಂಭಿಸಿದ್ದರು. ಎಎಪಿ ಸ್ಥಾಪಕರಲ್ಲಿ ಒಬ್ಬರಾದ ಶಾಜಿಯಾ ಇಲ್ಮಿ ಕೆಲವು ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಶನಿವಾರ ಯೋಗೇಂದ್ರ ಯಾದವ್ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. [ಶಾಜಿಯಾ ಇಲ್ಮಿ ರಾಜೀನಾಮೆ]
ಗುರ್ಗಾಂವ್ ಫಲಿತಾಂಶ : ಹರ್ಯಾಣ ರಾಜ್ಯದ ಗುರ್ಗಾಂವ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇಂದ್ರಜಿತ್ ಸಿಂಗ್ ರಾವ್ 6,44,780 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷದ ಜಾಕೀರ್ ಹುಸೇನ್ 3,70,058 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ರಾವ್ ಧರ್ಮಪಾಲ್ ಮೂರನೇ ಸ್ಥಾನ ಪಡೆದಿದ್ದರೆ, 79,452 ಮತಗಳನ್ನು ಪಡೆದ ಯೋಗೇಂದ್ರ ಯಾದವ್ 4ನೇ ಸ್ಥಾನಗಳಿಸಿದ್ದರು. [ಮಾಹಿತಿ ಚುನಾವಣಾ ಆಯೋಗ]











Click it and Unblock the Notifications