ಪಬ್‌ಜಿ ಆಡಲು ಅಜ್ಜನ ಖಾತೆಯಿಂದಲೇ 2.3 ಲಕ್ಷ ರೂ. ಎಗರಿಸಿದ ಮೊಮ್ಮಗ
ನವದೆಹಲಿ, ಸೆಪ್ಟೆಂಬರ್ 8: ಪಬ್‌ಜಿ ಆಡುವ ಗೀಳಿಗೆ ಬಿದ್ದಿದ್ದ ಬಾಲಕನೊಬ್ಬ ತನ್ನ ಅಜ್ಜನ ಪಿಂಚಣಿ ಖಾತೆಯಿಂದಲೇ 2.3 ಲಕ್ಷ ರೂ ಎಗರಿಸಿದ ಘಟನೆ ವರದಿಯಾಗಿದೆ.
ಅಜ್ಜನಿಗೆ ಗೊತ್ತಾಗದಂತೆ ಅವರ ಪಿಂಚಣಿ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡುತ್ತಿದ್ದ 15 ವರ್ಷದ ಬಾಲಕ , ಆ ಹಣವನ್ನು ಹಲವು ತಿಂಗಳವರೆಗೆ ಪಬ್‌ಜಿ ಆಡಲು ಬಳಸಿಕೊಳ್ಳುತ್ತಿದ್ದ ಎಂದು ದೆಹಲಿಯ ಸೈಬರ್ ಘಟಕದ ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕ್ ಖಾತೆಯಿಂದ 2,500 ರೂ. ಕಡಿತವಾಗಿದ್ದು, ಖಾತೆಯಲ್ಲಿ ಕೇವಲ 275 ರೂ. ಬಾಕಿ ಉಳಿದಿದೆ ಎಂಬ ಸಂದೇಶ ಮೊಬೈಲ್ ಫೋನ್‌ಗೆ ಬಂದಿತ್ತು. ಕೂಡಲೇ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ತಮ್ಮ ಪಿಂಚಣಿ ಖಾತೆಯಿಂದ ಆಗಲೇ 2.34 ಲಕ್ಷ ರೂ ವರ್ಗಾವಣೆಯಾಗಿರುವುದು ಗೊತ್ತಾಯಿತು. ಬಳಿಕ ಅವರು ಪೊಲೀಸರಿಗೆ ದೂರು ನೀಡಿದರು. ತಾವು ಯಾವುದೇ ಹಣ ವರ್ಗಾವಣೆ ಮಾಡಿಲ್ಲ ಮತ್ತು ಒಮ್ಮೆಯೂ ಒಟಿಪಿ ಬಂದಿಲ್ಲ ಎಂದು ತಿಳಿಸಿದರು.

ಎರಡು ತಿಂಗಳ ಅವಧಿಯಲ್ಲಿ ದೂರುದಾರರ ಖಾತೆಯಿಂದ 2,34,497 ರೂ ವರ್ಗಾವಣೆಯಾಗಿರುವುದು ಪೊಲೀಸರಿಗೆ ಕಂಡುಬಂತು. ಈ ಹಣವು 23 ವರ್ಷದ ಪಂಕಜ್ ಕುಮಾರ್ ಎಂಬುವವರ ಹೆಸರಿನಲ್ಲಿ ನೋಂದಣಿಯಾಗಿದ್ದ ಪೇಟಿಎಂ ಖಾತೆಗೆ ವರ್ಗಾವಣೆಗಾಗುತ್ತಿದ್ದದ್ದು ಗೊತ್ತಾಯಿತು. ಪಂಕಜ್ ಕುಮಾರ್‌ನನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದರು. ತಮ್ಮ ಸ್ನೇಹಿತರಲ್ಲೊಬ್ಬಾತ ತನ್ನ ಪೇಟಿಎಂ ಖಾತೆಯ ಐಡಿ ಹಾಗೂ ಪಾಸ್‌ವರ್ಡ್ ಕೇಳಿದ್ದ ಎಂಬುದನ್ನು ಬಾಯ್ಬಿಟ್ಟ.
ಪಂಕಜ್‌ನ ಖಾತೆಯಿಂದ ಪಬ್‌ಜಿಗಾಗಿ ಗೂಗಲ್ ಪೇ ಮೂಲಕ ಹಣ ಪಾವತಿ ಮಾಡುತ್ತಿದ್ದ ಕಿಡಿಗೇಡಿಯನ್ನು ಪೊಲೀಸರು ಪತ್ತೆಹಚ್ಚಿದರು. ಆತ ದೂರುದಾರ ಅಜ್ಜನ ಮೊಮ್ಮಗ. ಪಬ್‌ಜಿ ಆಡುವ ಸಲುವಾಗಿ ಅಜ್ಜನ ಖಾತೆಯ ಹಣವನ್ನು ತಾನೇ ವರ್ಗಾವಣೆ ಮಾಡಿದ್ದಾಗಿ ಆ ಬಾಲಕ ಒಪ್ಪಿಕೊಂಡಿದ್ದಾನೆ. ಬ್ಯಾಂಕ್ ಖಾತೆ ಹ್ಯಾಕ್ ಆಗಿರುವ ಅನುಮಾನ ಬಾರದಂತೆ ತಡೆಯಲು ಅಜ್ಜನ ಮೊಬೈಲ್‌ಗೆ ಬರುತ್ತಿದ್ದ ಒಟಿಪಿಯನ್ನು ಕೂಡಲೇ ಡಿಲೀಟ್ ಮಾಡುತ್ತಿದ್ದದ್ದಾಗಿ ಆತ ತಿಳಿಸಿದ್ದಾನೆ.












Click it and Unblock the Notifications