ದೆಹಲಿಯಲ್ಲಿ ದಾಖಲೆ: ಮಂಗಳವಾರ 496, ಬುಧವಾರ 923 ಮಂದಿಗೆ ಕೊರೊನಾವೈರಸ್!
ನವದೆಹಲಿ, ಡಿಸೆಂಬರ್ 30: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ಹೆಚ್ಚಾಗಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳಲ್ಲಿ ಶೇ.86ರಷ್ಟು ಹೆಚ್ಚಾಗಿದೆ. ಮೇ.30ರ ನಂತರ ಮೊದಲ ಬಾರಿಗೆ ದೆಹಲಿಯಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ.
ಕಳೆದೊಂದು ವಾರದಿಂದ ನವದೆಹಲಿಯಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದೊಂದು ದಿನದಲ್ಲಿ 923 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಪಾಸಿಟಿವಿಟಿ ದರ ಈಗ ಶೇ.1.29ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ಸೋಂಕಿನಿಂದ ಒಂದೇ ಒಂದು ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.
ಯೆಲ್ಲೋ ಅಲರ್ಟ್ ಅಡಿಯಲ್ಲಿ ದೆಹಲಿ ಸರ್ಕಾರವು ಹೊಸ ನಿರ್ಬಂಧಗಳನ್ನು ವಿಧಿಸಿದ ಒಂದು ದಿನದ ನಂತರ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. - ಕೋವಿಡ್-19 ಪಾಸಿಟಿವಿಟಿ ದರವು ಸತತ ಎರಡು ದಿನಗಳವರೆಗೆ ಶೇಕಡಾ 0.5ರಷ್ಟು ಹೆಚ್ಚಾಗಿದೆ. ದೆಹಲಿಯಲ್ಲಿ ಪ್ರಸ್ತುತ 2,191 ಕೊವಿಡ್-19 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 14,45,102ಕ್ಕೆ ಏರಿಕೆಯಾಗಿದೆ. ಇನ್ನು, ದೆಹಲಿಯಲ್ಲಿ ಮಹಾಮಾರಿಗೆ ಇದುವರೆಗೂ 25,107 ಜನರು ಪ್ರಾಣ ಬಿಟ್ಟಿದ್ದಾರೆ.

ದೆಹಲಿ ಸರ್ಕಾರದಿಂದ ಕಠಿಣ ನಿರ್ಬಂಧ:
ರಾಷ್ಟ್ರ ರಾಜಧಾನಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಯೆಲ್ಲೋ ಅಲರ್ಟ್ ಅಡಿಯಲ್ಲಿ, ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಸಿನಿಮಾ ಹಾಲ್‌ಗಳು, ಜಿಮ್‌ಗಳು ಮತ್ತು ಸ್ಪಾಗಳನ್ನು ಮುಚ್ಚಲಾಗಿದ್ದು, ಅಂಗಡಿಗಳು ಮತ್ತು ಮಾಲ್‌ಗಳನ್ನು ಬೆಸ-ಸಮ ಆಧಾರದ ಮೇಲೆ ತೆರೆಯಲು ಅನುಮತಿಸಲಾಗಿದೆ.
ದೆಹಲಿ ಮೆಟ್ರೋ ಪ್ರಸ್ತುತ ಶೇಕಡಾ 50ರಷ್ಟು ಆಸನ ಸಾಮರ್ಥ್ಯದಲ್ಲಿ ಚಾಲನೆಯಲ್ಲಿದೆ. ಮಾರ್ಗಸೂಚಿಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಗೇಟ್‌ಗಳ ಸಂಖ್ಯೆಯನ್ನು ಮಿತಿಗೊಳಿಸುವ ಮೂಲಕ ಮೆಟ್ರೋ ನಿಲ್ದಾಣಗಳಿಗೆ ಪ್ರವೇಶವನ್ನು ನಿಯಂತ್ರಿಸಲಾಗುತ್ತದೆ. ಇದರೊಂದಿಗೆ ಮೆಟ್ರೋ ನಿಲ್ದಾಣದ 712 ಗೇಟ್‌ಗಳ ಪೈಕಿ 444 ಮಾತ್ರ ತೆರೆದಿರುತ್ತದೆ ಎಂದು ಹೇಳಲಾಗಿದೆ. ಈಗಾಗಲೇ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ.
ದೆಹಲಿಯಲ್ಲಿ ಓಮಿಕ್ರಾನ್ ಭೀತಿ:
ನಿನ್ನೆಯೊಂದೇ ದಿನ ದೆಹಲಿಯಲ್ಲಿ 496 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಇದು ಆರು ತಿಂಗಳ ಅವಧಿಯಲ್ಲಿ ಒಂದೇ ದಿನ ವರದಿಯಾದ ಅತಿಹೆಚ್ಚು ಸಂಖ್ಯೆಯಾಗಿತ್ತು. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 73 ಒಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸಂಖ್ಯೆ 238ಕ್ಕೆ ಏರಿಕೆಯಾಗಿದೆ. ಮಾರ್ಚ್-ಏಪ್ರಿಲ್‌ನಲ್ಲಿ ಎರಡನೇ ಅಲೆಗಿಂತ ಈ ಬಾರಿ ಕೊವಿಡ್‌ನ ಸರಾಸರಿ ದೈನಂದಿನ ಏರಿಕೆಯು ಶೇಕಡಾ 21ರಷ್ಟು ವೇಗವಾಗಿದೆ ಎಂದು ಅಂಕಿ-ಅಂಶಗಳು ಸ್ಪಷ್ಟವಾಗಿ ತೋರಿಸುತ್ತಿವೆ. ಏಳು ದಿನಗಳಲ್ಲಿ ಏರಿಕೆಯ ಸರಾಸರಿ ಪ್ರಕರಣ 56 ರಿಂದ 199ಕ್ಕೆ ಏರಿಕೆಯಾಗಿದೆ.
ಯಾವುದೇ ಹೆಚ್ಚುವರಿ ನಿರ್ಬಂಧಗಳಿಲ್ಲ:
ಜಾಗತಿಕ ಮಟ್ಟದಲ್ಲಿ ವೇಗವಾಗಿ ಹರಡುತ್ತಿರುವ ಕೊವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಭೀತಿಯೊಂದು ಕಡೆಯಾದರೆ, ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆ ಆಗುತ್ತಿದೆ. ಇದರ ಹೊರತಾಗಿಯೂ ಸಭೆ ನಡೆಸಿದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸದಿರಲು ನಿರ್ಧರಿಸಿದೆ.
ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಯ "ಹಳದಿ ಎಚ್ಚರಿಕೆ"(ಯೆಲ್ಲೋ ಅಲರ್ಟ್) ಸ್ವಲ್ಪ ಸಮಯದವರೆಗೆ ಮುಂದುವರಿಸಲಾಗುವುದು ಎಂದು ನಿರ್ಧರಿಸಲಾಗಿದೆ. ಮುಂದಿನ ಡಿಡಿಎಂಎ ಸಭೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಲಭ್ಯತೆಯ ಬಗ್ಗೆ ಮೇಲ್ವಿಚಾರಣೆ ಮಾಡಿದ ನಂತರ ಹೆಚ್ಚಿನ ನಿರ್ಬಂಧಗಳನ್ನು ಜಾರಿಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.












Click it and Unblock the Notifications