ಭಾರತದಲ್ಲಿ 41,331 ಪಾಕ್ ಪ್ರಜೆಗಳು ನೆಲೆಸಿದ್ದಾರೆ: ಕೇಂದ್ರ ಸರ್ಕಾರ
ನವದೆಹಲಿ, ಜುಲೈ 16: ಭಾರತದಲ್ಲಿ ಸುದೀರ್ಘ ಸಮಯದಿಂದ 41,331 ಪಾಕಿಸ್ತಾನಿ ಪ್ರಜೆಗಳು ಮತ್ತು 4,193 ಅಫ್ಘಾನಿಸ್ತಾನದ ನಾಗರಿಕರು ನೆಲೆಸಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಗುರುತಿಸಲಾಗಿರುವ ಆರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನರು ಅನುಭವಿಸುತ್ತಿರುವ ಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು 2014ರಲ್ಲಿ ಆರಂಭಿಸಲಾದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮೂಲಕ ದೀರ್ಘಾವಧಿ ವೀಸಾವನ್ನು (ಎಲ್‌ಟಿವಿ) ಪಡೆದುಕೊಂಡು ಭಾರತದಲ್ಲಿ ನೆಲೆಸಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಮಂಗಳವಾರ ಮಾಹಿತಿ ನೀಡಿದರು.
'2018ರ ಡಿಸೆಂಬರ್ 31ರ ವೇಳೆಗೆ ಲಭ್ಯವಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ದೀರ್ಘಾವಧಿ ವೀಸಾ ಆಧಾರದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ 41,331 ಪಾಕಿಸ್ತಾನಿ ಪ್ರಜೆಗಳು ಮತ್ತು 4,193 ಅಫ್ಘಾನಿಸ್ತಾನದ ಪ್ರಜೆಗಳು ವಾಸಿಸುತ್ತಿದ್ದಾರೆ' ಎಂದು ಅವರು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಕಳೆದ ಮಾರ್ಚ್‌ನಲ್ಲಿ ಪುಣೆಯಲ್ಲಿ 40ಕ್ಕೂ ಅಧಿಕ ಪಾಕಿಸ್ತಾನಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿತ್ತು. 40 ವರ್ಷಕ್ಕೂ ಹಿಂದೆ ಭಾರತಕ್ಕೆ ಬಂದಿದ್ದ ಅವರಿಗೆ ಭಾರತದ ಪೌರತ್ವ ಇರಲಿಲ್ಲ. 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅವರಿಗೆ ಭಾರತವು ಪೌರತ್ವ ನೀಡಿತ್ತು.












Click it and Unblock the Notifications