ವರದಕ್ಷಿಣೆ ಕಿರುಕುಳ: ಪತ್ನಿ ಸಾವು, ಪತಿ ಅರೆಸ್ಟ್, ಒಂದು ವರ್ಷದ ಮಗು ಅನಾಥ
ಮೈಸೂರು, ನವೆಂಬರ್ 02: ಮೈಸೂರು ಜಿಲ್ಲೆಯ ಹನಗೂಡು ಹೋಬಳಿಯ ಕೂಡ್ಲೂರು ಗ್ರಾಮದಲ್ಲಿ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದೆ. ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಗೃಹಿಣಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣಾಗಿರುವ ಆರೋಪ ಕೇಳಿ ಬಂದಿದೆ.
ಹುಣಸೂರು ತಾಲೂಕಿನ ಕೂಡ್ಲೂರು ನಿವಾಸಿ ಅಂತೊಣಿ ಕಿರಣ್ ಎಂಬಾತನ ಪತ್ನಿ ನಿತ್ಯ ನಿರ್ಮಲಾ(25) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ತುಮಕೂರು ಜಿಲ್ಲೆಯ ಸಣ್ಣೇನ ಹಳ್ಳಿಯ ತೆರೆಸಮ್ಮ ಅವರ ಮಗಳನ್ನು ಎರಡು ವರ್ಷಗಳ ಹಿಂದೆ ಕೂಡ್ಲೂರಿನ ಅಂತೋಣಿ ಕಿರಣ್ ಎನ್ನುವಾತನಿಗೆ ಮದುವೆ ಮಾಡಿ ಕೊಟ್ಟಿದ್ದರು. ನಿರ್ಮಲಾ-ಕಿರಣ್ ದಂಪತಿಗೆ ಒಂದು ವರ್ಷದ ಮಗು ಕೂಡ ಇದೆ.

ಕೆಲವು ದಿನಗಳಿಂದ ಪತಿ ಕಿರಣ್ ಮನೆಕಟ್ಟುತ್ತಿದ್ದೇನೆ. ನನ್ನ ಮದುವೆ ವೇಳೆ ವರದಕ್ಷಿಣೆ ಕೊಟ್ಟಿಲ್ಲ. ಬೇರೆಯವರನ್ನು ಮದುವೆಯಾಗಿದ್ದರೆ ಲಕ್ಷಾಂತರ ವರದಕ್ಷಿಣೆ ಸಿಗುತ್ತಿತ್ತು. ಈಗಲಾದರೂ ತವರು ಮನೆಯಿಂದ ಹಣ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು. ಈ ಬಗ್ಗೆ ಎರಡು ಮೂರು ಬಾರಿ ನ್ಯಾಯ ಪಂಚಾಯತಿ ಕೂಡ ನಡೆದಿತ್ತು ಎನ್ನುವ ಮಾಹಿತಿ ಇದೆ.
ಇದೇ ವಿಚಾರಕ್ಕೆ ಇತ್ತೀಚೆಗೆ ಪತಿಯ ಕಿರುಕುಳ ಹೆಚ್ಚಾಗಿತ್ತು. ಈ ಬಗ್ಗೆ ತಾಯಿಯೊಂದಿಗೆ ತನ್ನ ಕಷ್ಟವನ್ನೆಲ್ಲಾ ನಿರ್ಮಲಾ ಹೇಳಿಕೊಂಡಿದ್ದಳು ಎನ್ನಲಾಗಿದೆ. ತಾಯಿ ತೆರೆಸಮ್ಮ ಏನೂ ಮಾಡಲಾಗದೆ ಊರಿನವರಿಗೆ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂದು ಅಂಜಿ ಮಗಳಿಗೆ ಸಾಂತ್ವನ ಹೇಳುತ್ತಲೇ ಬಂದಿದ್ದರು.
ನಿರ್ಮಲಾ ತಾನು ಸಾಯುವ ದಿನ ತನ್ನ ತಾಯಿಗೆ ಪೋನ್ ಮಾಡಿ, ನನಗೆ ಹಣ ತರುವಂತೆ ಚಿತ್ರ ಹಿಂಸೆ ಕೊಡುತ್ತಿದ್ದಾರೆ. ಗಂಡ ಹಾಗೂ ಮನೆಯವರು ನನ್ನನ್ನು ಸಾಯಿಸುತ್ತಾರೆ. ಬಂದು ನನ್ನನ್ನು ಕರೆದು ಕೊಂಡು ಹೋಗುವಂತೆ ತಾಯಿಯೊಂದಿಗೆ ಗೋಳಾಡಿದ್ದಾಳೆ. ಮಗಳ ಮಾತಿಗೆ ಸಮಾಧಾನ ಹೇಳಿದ್ದ ತಾಯಿ ಆಮೇಲೆ ಬರುತ್ತೇನೆ ಎಂದು ಹೇಳಿದ್ದರು.
ಶಾಲೆಯ ಮಧ್ಯಾಹ್ನದ ಅಡುಗೆ ಕೆಲಸ ಮುಗಿದ ನಂತರ ತಾಯಿ ಮಗಳಿಗೆ ಪೋನ್ ಮಾಡಿದ್ದಾರೆ. ಈ ವೇಳೆ ಫೋನ್ ಹೋಗದೇ ಇದ್ದಾಗ ಗಾಬರಿಯಾಗಿ ಅಳಿಯನ ಮನೆಯ ಅಕ್ಕಪಕ್ಕದವರಿಗೆ ಫೋನ್ ಮಾಡಿದ್ದಾರೆ. ಈ ವೇಳೆ ಮಗಳು ಸಾವನ್ನಪ್ಪಿರುವ ಸುದ್ದಿ ತಾಯಿಗೆ ತಿಳಿದು ಬಂದಿದ್ದು, ತಾಯಿ ಗ್ರಾಮಸ್ಥರೊಂದಿಗೆ ಕೂಡ್ಲೂರಿಗೆ ಹೋದ ವೇಳೆ ಗಂಡನ ಮನೆಯವರು ಅಂತ್ಯ ಕ್ರಿಯೆಗೆ ತಯಾರಿ ಮಾಡಿಕೊಂಡಿದ್ದರು.
ಈ ವೇಳೆ ಎರಡೂ ಕಡೆಯವರ ನಡುವೆ ಗಲಾಟೆ ನಡೆದಿದ್ದು, ಶವವನ್ನು ಸೂಕ್ಷ್ಮವಾಗಿ ಗಮನಸುವ ವೇಳೆ ಕುತ್ತಿಗೆ ಬಿಗಿದು ಗಾಯವಾಗಿರುವುದು ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡು ತೆರೆಸಮ್ಮ ಗ್ರಾಮಾಂತರ ಪೊಲೀಸರಿಗೆ ಮಗಳನ್ನು ಗಂಡನ ಮನೆಯವರು ನೇಣು ಹಾಕಿದ್ದಲ್ಲದೇ, ಮಾಹಿತಿ ನೀಡದೆ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆಂದು ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಅಂತೋಣಿ ಕಿರಣ್ ಮತ್ತು ಆತನ ಕುಟುಂಬದವರನ್ನು ವಶಕ್ಕೆ ಪಡೆದಿದ್ದಾರೆ.












Click it and Unblock the Notifications