ಏಕಾಏಕಿ ಕಾಣಿಸಿಕೊಳ್ಳುವ ಅಸ್ತಿ ಶಿಥಿಲತೆಗೆ ಪರಿಹಾರವೇನು..? ಚಿಕಿತ್ಸೆ ಹೇಗೆ?
ಮೈಸೂರು, ಅಕ್ಟೋಬರ್ 31: ಯಾವುದೇ ತರಹದ ರೋಗ ಲಕ್ಷಣ ಹಾಗೂ ಮುನ್ಸೂಚನೆಗಳನ್ನೂ ನೀಡದೆ ಹಠಾತ್ತನೇ ಕಾಣಿಸಿಕೊಳ್ಳುವ ಆಸ್ಟಿಯೊಪೊರೋಸಿಸ್ ಕಾಯಿಲೆಯನ್ನು ಸೂಕ್ತ ಅರಿವು, ಸಕಾಲಿಕ ತಪಾಸಣೆ ಹಾಗೂ ವೈದ್ಯಕೀಯ ಸಲಹೆಗಳಿಂದ ಗುಣ ಮಾಡಬಹುದಾಗಿದೆ ಎಂದು ಡಾ.ಪ್ರೇಮನಾಥ್ ತಿಳಿಸಿದರು.
ಮೈಸೂರು ನಗರದ ಜೆಎಸ್ಎಸ್ ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ನಡೆದ ವಿಶ್ವ ಆಸ್ಟಿಯೊಪೊರೋಸಿಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಸ್ಟಿಯೊಪೊರೋಸಿಸ್ (ಅಸ್ತಿ ಶಿಥಿಲತೆ) ಅನ್ನು ಸಾಮಾನ್ಯವಾಗಿ ನಿಶ್ಶಬ್ಧ ಕಾಯಿಲೆ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಸಾಮಾನ್ಯವಾಗಿ ಸೊಂಟ ಅಥವಾ ಬೆನ್ನುಮೂಳೆಯಲ್ಲಿ ಮುರಿತ ಸಂಭವಿಸುವವರೆಗೂ ಮೇಲ್ನೋಟಕ್ಕೆ ರೋಗಲಕ್ಷಣಗಳೇ ಗೋಚರವಾಗುವುದಿಲ್ಲ. ಆದ್ದರಿಂದ ವಯಸ್ಸಾದವರು ಆಗ್ಗಾಗ್ಗೆ ವೈದ್ಯಕೀಯ ತಪಾಸಣೆಗೆ ಒಳಾಗದರೇ ಈ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದು. ಮೂಳೆ ಮುರಿತಗಳನ್ನೂ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.

ಹಿರಿಯ ನಾಗರಿಕರಿಗೆ ಮೂಳೆಗಳ ಆರೋಗ್ಯದ ಬಗ್ಗೆ ಜಾಗೃತಿ, ಮಾಹಿತಿ ಮತ್ತು ಚಿಕಿತ್ಸೆಯನ್ನು ನೀಡುವ ಕಾರ್ಯಕ್ರಮವೇ ಆಸ್ಟೀಯೊಪೊರೋಸಿಸ್ ದಿನಾಚರಣೆ. ವಯಸ್ಸಾದಂತೆಲ್ಲಾ ಮೂಳೆಗಳು ಸವೆಯುತ್ತಾ ಮುರಿತಕ್ಕೊಳಗಾಗಿ ನಡೆಯಲು ತುಂಬಾ ಕಷ್ಟವಾಗುತ್ತದೆ. ಹಿರಿಯ ನಾಗರಿಕರು ಮನೆಯಲ್ಲಿ ಶೌಚಾಲಯ ಮತ್ತು ಸ್ನಾನದ ಕೊಠಡಿಯನ್ನು ಬಹಳ ಜೋಪನಾವಾಗಿ ಉಪಯೋಗಿಸಬೇಕು. ಬಿದ್ದು ಮೂಳೆಗಳು ಮುರಿತಕ್ಕೆ ಒಳಗಾದರೆ ಬೇರೆಯವರನ್ನು ಅವಲಂಬಿಸಬಾಕಾಗುತ್ತದೆ. ಹಾಗಾಗಿ ಯಾರಿಗೂ ಹೊರೆಯಾಗದಂತೆ ಮುನ್ನೆಚ್ಚರಿಕೆಯಿಂದ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಈಸ್ಟ್ರೋಜೆನ್ ನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುವ ವೃದ್ಧಾಪ್ಯದ ಹತ್ತಿರದಲ್ಲಿರುವ ವ್ಯಕ್ತಿಗಳಲ್ಲಿ ಹಾಗೂ ಋತುಬಂಧಕ್ಕೊಳಗಾದ ಮಹಿಳೆಯರ ಮೇಲೆ ಆಸ್ಟಿಯೊಪೊರೋಸಿಸ್ ಕಾಯಿಲೆ ಹೆಚ್ಚು ಪರಿಣಾಮ ಬೀರುತ್ತದೆ. ಅಲ್ಲದೇ ಅನುವಂಶಿಯ ಇತಿಹಾಸ, ದೇಹದ ತೂಕ ಕಡಿಮೆ ಇರುವುದು, ಕೆಲವು ಔಷಧಿಗಳನ್ನು ದೀರ್ಘಾವಧಿಯಾಗಿ ಬಳಕೆ ಮಾಡುವುದು, ಸಂಧಿವಾತ, ಥೈರಾಯ್ಡ್ ನಂತಹ ಕಾಯಿಲೆ ಇರುವವರು ಆಸ್ಟಿಯೊಪೊರೋಸಿಸ್ ಕುರಿತು ಅರಿವನ್ನು ಹೊಂದಬೇಕು ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ತಂತ್ರಜ್ಞಾನಗಳ ಅಳವಡಿಕೆಯಿಂದ ಆಸ್ಟಿಯೊಪೊರೋಸಿಸ್ ಕಾಯಿಲೆಯನ್ನು ಉಪ ಶಮನ ಮಾಡಬಹುದು. 60 ದಾಟಿದ ಪುರುಷರು ಹಾಗೂ ಮಹಿಳೆಯರು ಮೂಳೆ ಖನಿಜ ಸಾಂದ್ರತೆ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿಕೊಂಡರೇ ಚಿಕಿತ್ಸೆ ಸುಲಭವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಜೆಎಸ್ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್. ಬಸವಗೌಡಪ್ಪ, ಜೆಎಸ್ಎಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಪಿ.ಮಧು, ಜೀರಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥೆ ಡಾ.ಪ್ರತಿಭಾ ಪೆರೇರಾ,ಡಾ.ಕ್ಷಮಾ ಮತ್ತಿತರರು ಹಾಜರಿದ್ದರು.











Click it and Unblock the Notifications