ಮತದಾರರ ಜಾಗೃತಿ ಅಭಿಯಾನಕ್ಕೆ ಐಕಾನ್ ಆಗಿ ನಿವೇದಿತಾ ಗೌಡ ಆಯ್ಕೆ
ಮೈಸೂರು, ಏಪ್ರಿಲ್ 30: ಮೈಸೂರು ಜಿಲ್ಲೆಯ ಮತದಾರರ ಜಾಗೃತಿ ಅಭಿಯಾನಕ್ಕೆ ಐಕಾನ್ ಆಗಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಮತದಾರರಲ್ಲಿ ನೋಂದಣಿ ಮತ್ತು ನೈತಿಕ ಮತದಾನದ ಕುರಿತು ಜಾಗೃತಿ ಮೂಡಿಸುವ ಕುರಿತು ಸ್ವೀಪ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚಾಮುಂಡಿಬೆಟ್ಟದಲ್ಲಿ ದಸರಾ ಸಮಯದಲ್ಲಿ ವಿದ್ಯುತ್ ಬಲ್ಬ್‌ಗಳ ಮುಖಾಂತರ ದೀಪಾಲಂಕಾರ ಮಾಡಿ 'ಸುಸ್ವಾಗತ'ಕೋರುವಂತೆ 'ನಿಮ್ಮ ಮತ ನಮ್ಮ ಹಕ್ಕು' ಅಭಿಯಾನದಡಿ ಏ. 27ರಿಂದ ಮೇ.11ರವರೆಗೆ ಸಂಜೆ 7 ರಿಂದ 10ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಎಲ್ಲ ಕಾರ್ಯಕ್ರಮಗಳು ಸೇರಿದಂತೆ ಮತದಾನದ ಪ್ರಮಾಣದ ಶೇಕಡವಾರು ಹೆಚ್ಚಳಕ್ಕೆ, ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ಅಭಿಯಾನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮುಖ್ಯವಾಗಿ ಮಹಿಳೆಯರು, ಅಂಗವಿಕಲರು, ಲೈಂಗಿಕ ಕಾರ್ಯಕರ್ತೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಐಕಾನ್ ಆಗಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

ನಿವೇದಿತಾ ಗೌಡ ಹಾಗೂ ಮೈಸೂರು ಜಿಪಂ ಸಿಇಒ ಶಿವಶಂಕರ್ ಅವರು ಮತದಾನ ಜಾಗೃತಿಯ ಆಡಿಯೋ ಬಿಡುಗಡೆ ಮಾಡಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿವಶಂಕರ್, ಆಂದೋಲನಕ್ಕೆ ನಿವೇದಿತಾ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ನಿವೇದಿತಾ ಗೌಡ ಮಾತನಾಡಿ, ನನ್ನ ಹುಟ್ಟುಹಬ್ಬದ ದಿನದಂದೇ ಮೊದಲ ಬಾರಿಗೆ ಮತ ಚಲಾಯಿಸಲು ಅವಕಾಶ ಸಿಕ್ಕಿದೆ. ಹೀಗಾಗಿ ಮತದಾನದ ದಿನಾಂಕವನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ. 2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸಿ ಎಂದು ಮನವಿ ಮಾಡಿದರು.












Click it and Unblock the Notifications