Mysuru Palace: ಮೈಸೂರು ಅರಮನೆ ಬರೀ ಅರಮನೆಯಲ್ಲ..ಅದೊಂದು ಅದ್ಭುತ ಸಂಗ್ರಹಾಲಯ!
ಮೈಸೂರು, ಸೆಪ್ಟೆಂಬರ್ 27: ಮೈಸೂರಿನ ಪ್ರಮುಖ ಆಕರ್ಷಣೆಯೇ ಅರಮನೆ. ಇದು ಇವತ್ತು ವಿಶ್ವವಿಖ್ಯಾತಿಯಾಗಿದ್ದು ಅತಿಹೆಚ್ಚು ಪ್ರವಾಸಿಗರು ವೀಕ್ಷಿಸುವ ತಾಣಗಳ ಪೈಕಿ ಇದಕ್ಕೂ ಸ್ಥಾನವಿದೆ. ಇದಕ್ಕೆ ಕಾರಣ ಇಲ್ಲಿನ ವಿಶೇಷತೆ ಎಂದರೆ ತಪ್ಪಾಗಲಾರದು. ಮೇಲ್ನೋಟಕ್ಕೆ ವಿದ್ಯುದ್ದೀಪದಿಂದ ಬೆಳಗುವ ಅರಮನೆಯಷ್ಟೇ ಕಾಣುತ್ತದೆ. ಆದರೆ ಒಳಗೆ ಹೋಗಿ ನೋಡಿದರೆ ಬರೀ ಅರಮನೆಯಲ್ಲ ಇದೊಂದು ಇತಿಹಾಸದ ಸಂಗ್ರಹಾಲಯ ಎಂಬುದು ನಮ್ಮ ಅರಿವಿಗೆ ಬರುತ್ತದೆ.
ವಿಶಿಷ್ಟ ಮತ್ತು ವಿಭಿನ್ನವಾಗಿ ನಿರ್ಮಾಣವಾಗಿರುವ ಅರಮನೆಯ ಹಿಂದೆ ನುರಿತ ಶಿಲ್ಪಿಗಳಿಂದ ವಿಶಿಷ್ಟ ವಾಸ್ತುಶಿಲ್ಪಿಗಳು ಇರುವುದನ್ನು ನಾವು ಕಾಣಬಹುದಾಗಿದೆ. ಹೀಗಾಗಿ ಈ ಅರಮನೆ ಸೂಜಿಗಲ್ಲಿನಂತೆ ಸೆಳೆಯುತ್ತಿದೆ, ಅರಮನೆ ಸುಂದರವಾಗಿ ಕಾಣಲು ಹಳೆಬೀಡು, ಬೇಲೂರು ಹಾಗೂ ಸೋಮನಾಥಪುರ ದೇವಾಲಯದ ನಿರ್ಮಾಣದಲ್ಲಿ ಮಾಡಲಾದ ಕುಸುರಿ ಕೆತ್ತನೆಯನ್ನು ಬಳಸಿಕೊಂಡಿರುವುದು ವಿಶೇಷವಾಗಿದೆ.

ಅರಮನೆಯ ನಿರ್ಮಾಣವು 1897 ರಿಂದ ಆರಂಭಗೊಂಡ ಅರಮನೆಯ ನಿರ್ಮಾಣ ಕಾರ್ಯ 1911-12ರಲ್ಲಿ ಸುಮಾರು 41,47,913ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿತು. ಕೋಟೆ ಸೇರಿದಂತೆ ಸುಮಾರು 72 ಎಕರೆಗಿಂತಲೂ ಹೆಚ್ಚಿನ ವಿಸ್ತಾರದಲ್ಲಿ ನೆಲೆನಿಂತಿರುವ ಅರಮನೆ 74.50 ಮೀ ಉದ್ದ ಹಾಗೂ 47.50 ಮೀಟರ್ ಅಗಲವಾಗಿದೆ. ಅರಮನೆಯ ಮುಖ್ಯ ಕಟ್ಟಡವನ್ನು ಕಂದು ಬಣ್ಣದ ದಪ್ಪ ಸ್ಪಟಿಕದ ಗಟ್ಟಿ ಶಿಲೆಗಳಿಂದ ನಿರ್ಮಿಸಲಾಗಿದೆ. ಅರಮನೆಯ ಮಧ್ಯಭಾಗದ ಐದು ಅಂತಸ್ತಿನ ಬಂಗಾರದ ಗಿಲೀಟಿನ ಗಗನಚಂಬಿ ಗೋಪುರವು ಭೂಮಿಯಿಂದ ಸುಮಾರು 145 ಅಡಿ ಎತ್ತರದಲ್ಲಿದೆ.
ಅರಮನೆಗೆ ಆಕರ್ಷಕ ಆನೆ ದ್ವಾರ
ಅರಮನೆಯು ಬೆಳಕಿಗೆ ಬಿಟ್ಟಿರುವ ಅಂಗಳದ (ತೊಟ್ಟಿ) ಸುತ್ತಲೂ ಕಟ್ಟಲ್ಪಟ್ಟಿದೆ. ಈ ತೊಟ್ಟಿಯ ಪೂರ್ವಭಾಗಕ್ಕೆ 21 ಅಡಿ ಅಗಲ ಹಾಗೂ 66 ಅಡಿ ಎತ್ತರವಿರುವ ಆಕರ್ಷಕ ಆನೆಯ ದ್ವಾರವಿದೆ. ದೊಡ್ಡ ಅಂಗಳದಲ್ಲಿ ಹೊರಗಡೆ ಸಜ್ಜೆಗೆ ಹೋಗುವ 15 ಅಡಿ ಅಗಲವುಳ್ಳ ದಾರಿಗಳು ದೊಡ್ಡ ಚೌಕದ ಹಾಗೆ ಕಾಣುತ್ತವೆ. ಇನ್ನು ಎರಡನೆ ಅಂತಸ್ತಿನಲ್ಲಿ ಪೂರ್ವ ಭಾಗಕ್ಕೆ 155 ಅಡಿ ಅಗಲವಿರುವ ವಿಶಾಲ ರಾಜ ಸಭಾಮಂದಿರವಿದೆ. ಅದರ ಮೇಲೆ ಖಾಸಗಿ ನಿವಾಸಿ ಸ್ಥಳಗಳಿವೆ.

ಕೆಳಗಿನ ಉಪ್ಪರಿಗೆಗೆ ಬಂದರೆ ಅಂಗಳದ ಉತ್ತರ ಭಾಗದಲ್ಲಿ ಆಯುಧಶಾಲೆ, ಪುಸ್ತಕ ಭಂಡಾರ, ಅವುಗಳ ಮೇಲೆ ಸಂಗೀತದ ಕೊಠಡಿ, ಸ್ತ್ರೀಯರ ಸ್ವಾಗತ ಕೊಠಡಿ ಮತ್ತು ಮೂರನೆಯ ಅಂತಸ್ತಿನಲ್ಲಿ ವಿಶ್ರಾಂತಿ ಕೊಠಡಿಗಳಿವೆ. ಒಳ ಅಂಗಳದ ಪಶ್ಚಿಮಕ್ಕೆ ಹಳೆಯ ಅರಮನೆಯಿದೆ. ದಕ್ಷಿಣ ಭಾಗದ ಹತ್ತಿರದಲ್ಲೇ ಮುದ್ದಾದ ನವಿಲಿನ ಕಲ್ಯಾಣ ಭದ್ರಮಂಟಪವಿದೆ. ಮುಂದೆ ಹೋದರೆ ಎರಡನೆಯ ಉಪ್ಪರಿಗೆಯಲ್ಲಿ ಅಂಬಾವಿಲಾಸ ಸಭಾ ಮಂಟಪವಿದೆ.
ಹೊಯ್ಸಳ ರೀತಿ ಕಲಾಕೃತಿಯ ಮೆರಗು
ಅರಮನೆಯ ದಕ್ಷಿಣ ಭಾಗದಲ್ಲಿ ರಾಣಿವಿಲಾಸ ಹಾಗೂ ಪೂಜಾ ಕೊಠಡಿಗಳಿವೆ. ಇವು ಅಂಬಾವಿಲಾಸ ಸಭಾಭವನದವರೆಗೂ ವಿಸ್ತರಿಸಿವೆ. ಮಧ್ಯಭಾಗದ ಮೂರು ನಾಲ್ಕು ಮತ್ತು ಐದನೇ ಅಂತಸ್ತುಗಳು ಮುಖ್ಯಗೋಪುರ ಶಿಖರಕ್ಕೆ ಆಧಾರಸ್ತಂಭಗಳಂತೆ ನಿಂತಿವೆ. ಅರಮನೆಯ ಹೊರನೋಟ ಹಿಂದೂ ಗ್ರೀಕ್ ಕಲೆಯ ರೂಪರೇಖೆಗಳಂತೆ ಕಂಡರೆ, ಬಾಗಿಲುಗಳ ಕಮಾನುಗಳ ಕಂಬ ಮತ್ತು ಬೋದುಗಳ ಅಲಂಕಾರಗಳು ಸ್ಪಷ್ಟ ಹೊಯ್ಸಳ ರೀತಿಯ ಕಲಾಕೃತಿಗಳಾಗಿವೆ.

ಅರಮನೆಯ ಮಧ್ಯದ ಗೋಪುರವು ಪ್ರಭಾವಯುತವಾಗಿದ್ದು ಉಳಿದವುಗಳೆಲ್ಲವೂ ಅದಕ್ಕೆ ಹೊಂದಿಕೊಂಡ ಆಕೃತಿಗಳಾಗಿವೆ. ಅರಮನೆಯ ಮುಖ್ಯ ಮುಖಭಾಗದಲ್ಲಿ ಬೆಳಕು ಮತ್ತು ನೆರಳನ್ನು ಪಡೆಯುವ ಉದ್ದೇಶದಿಂದ ಗೋಪುರಗಳ, ಮಸೀದಿಯ ರೀತಿಯ ಶಿಖರಗಳ ಕೈಸಾಲೆ, ಉಪ್ಪರಿಗೆಯ ಮೊಗಸಾಲೆಗಳ. ವಸಾರೆ, ಪಡಸಾಲೆ, ಜಗಲಿಗಳ ಪೌಳಿ ಮಂಟಪಗಳ ಹಾಗೂ ಗೋಪುರ ಶಿಖರಗಳನ್ನು ಬಿಡಿಸಿ ನಿರ್ಮಿಸಲಾಗಿದೆ.
ಇದೊಂದು ಅದ್ಭುತ ಸಂಗ್ರಹಾಲಯ
ಮುಂಭಾಗದಲ್ಲಿ ಬೃಹತ್ ಕಂಬಗಳ ಜೊತೆಗೆ ಸ್ಪಟಿಕದ ಗಟ್ಟಿ ಶಿಲೆಗಳನ್ನು ಕೊರೆದು ನಿರ್ಮಿಸಿರುವ, ಪಡಸಾಲೆ, ಉಪ್ಪರಿಗೆಯ ಮೊಗಸಾಲೆಗಳು ತಮ್ಮದೇ ಆದ ಶ್ರೀಮಂತಿಕೆಯ ವೈಭವವನ್ನು ಸೂಚಿಸುತ್ತವೆ. ಅರಮನೆಯ ಅಡಿಪಾಯದಿಂದ ಮುಖ್ಯ ಗೋಪುರದ ತುದಿಯವರೆಗೂ ಉತ್ತಮ ಮಟ್ಟದ ಹಿಂದೂ ಶಿಲ್ಪ ವಿದ್ಯೆಯ ನುರಿತ ಕೆಲಸಗಾರರಿಂದ ಶಿಲ್ಪಕಲೆ ರಚಿಸಲ್ಪಟ್ಟಿದೆ. ಅಲ್ಲದೆ ಉಚ್ಛ ರೀತಿಯ ಹಿಂದೂ ಶಿಲ್ಪ ಕಲೆ ಮತ್ತು ಗ್ರೀಕ್ ಕಲೆಯು ಮಿಳಿತಗೊಂಡು ಶೋಭಾಯಮಾನವಾಗಿ ಕಂಗೊಳಿಸುತ್ತದೆ. ಅರಮನೆಯಲ್ಲಿ ಮಾಡಿದ ಕಲ್ಲಿನ, ದಂತ ಮತ್ತು ಮರದ ಕೆತ್ತನೆ ಕೆಲಸ ಅಲ್ಲದೆ ಕಲ್ಲಿನ ಕುಂದಣ ಕೆಲಸ, ಲೇಪದ ಕೆಲಸಗಳು ಕಲೆಗಾರನ ಕೈಚಳಕನ್ನು ಪ್ರದರ್ಶಿಸಿದೆ.
ಕಟ್ಟಡದ ವಿವಿಧೆಡೆ ಸ್ಪಟಿಕದ ಕಲ್ಲು, ಕಂದುಬಣ್ಣದ ಶಿಲೆ, ಕಾಗೆ ಬಂಗಾರದಂತೆ ಮಿನುಗುವ ಬೆಣಚು ಶಿಲೆಗಳನ್ನು ಬಳಸಲಾಗಿದೆ. ಚಿತ್ರ ವಿಚಿತ್ರವಾದ ಬಣ್ಣದ ನಯಮಾಡಿದ ಕಲ್ಲಿನ ಕಂಬಗಳು ಯೋಗ್ಯ ಸ್ಥಳಗಳಲ್ಲಿ ನಿರ್ಮಿಸಲ್ಪಟ್ಟಿದೆ. ಅರಮನೆಯಲ್ಲಿರುವ ಅಂಬಾವಿಲಾಸ ದರ್ಬಾರ್ ಹಾಲ್ ರಾಜವೈಭವವನ್ನು ಸಾರುತ್ತದೆ. ಇಲ್ಲಿ 750 ಕೆ.ಜಿ. ತೂಕದ ಭವ್ಯ ಚಿತ್ತಾರದ ಚಿನ್ನದ ಅಂಬಾರಿ ಇದೆ. ಅಲ್ಲದೆ 135 ಕೆ.ಜಿ. ಬಂಗಾರವುಳ್ಳ ರತ್ನಖಚಿತ ಸಿಂಹಾಸನವೂ ಇದೆ. ಇನ್ನು ಅರಮನೆಯಲ್ಲಿನ ಆಯುಧ ಶಾಲೆ, ಸಂಗೀತ ಕೊಠಡಿ ಸೇರಿದಂತೆ ಹತ್ತು ಹಲವು ನೋಡತಕ್ಕ ಅತ್ಯಪೂರ್ವ ವಸ್ತುಗಳಿದ್ದು, ಇದೊಂದು ಅದ್ಭುತ ಸಂಗ್ರಹಾಲಯವಾಗಿದೆ.












Click it and Unblock the Notifications