ಸಾಂಸ್ಕೃತಿಕ ನಗರಿಗೆ ಬಿಗ್‌ಶಾಕ್: ಕರ್ನಾಟಕ ಹೆಮ್ಮೆ ಮೈಸೂರು ಯಾಕೆ ಹೀಗಾಯ್ತು?
ಮೈಸೂರು, ಜನವರಿ 12: ಸ್ವಚ್ಛ ಸರ್ವೇಕ್ಷಣೆ ಕಾರ್ಯಕ್ರಮದಲ್ಲಿ ಸತತ ಎರಡು ಬಾರಿ ಸ್ವಚ್ಛತಾ ನಗರಿ ಪಟ್ಟ ಪಡೆದುಕೊಂಡಿದ್ದ ಮೈಸೂರು ನಗರ ಇದೀಗ 27ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ 8ನೇ ಸ್ಥಾನ ಪಡೆದುಕೊಂಡಿದ್ದ ಮೈಸೂರು ಮಹಾನಗರ ಪಾಲಿಕೆ ಇದೀಗ 27ನೇ ಸ್ಥಾನ ಪಡೆಯುವುದರೊಂದಿಗೆ ಸ್ವಚ್ಛತೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ.
ಅಚ್ಚರಿ ಎಂದರೆ ದೇಶದ ಸ್ವಚ್ಛತಾ ನಗರಗಳ ಟಾಪ್ 10 ಪಟ್ಟಿಯಲ್ಲಿ ಮೈಸೂರು ಸ್ಥಾನವನ್ನೇ ಪಡೆದಿಲ್ಲ. ಕೇಂದ್ರ ಸರಕಾರದ ನಗರಾಭಿವೃದ್ಧಿ ಇಲಾಖೆ ಯಿಂದ ಕಳೆದ ಸಾಲಿನಲ್ಲಿ ದೇಶದಾದ್ಯಂತ ನಡೆಸಿದ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಮೈಸೂರು ಭಾಗಿಯಾಗಿತ್ತು.

ಮೈಸೂರು 2021ರಲ್ಲಿ 11 ಸ್ಥಾನಕ್ಕೆ ಕುಸಿತ ಕಂಡಿತ್ತು. ಅದನ್ನು ಹೊರತು ಪಡಿಸಿದರೆ ಉಳಿದ ಎಲ್ಲ ವರ್ಷಗಳಲ್ಲೂ ದೇಶದ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತಿತ್ತು. ಇದೇ ಪ್ರಥಮ ಬಾರಿಗೆ ಟಾಪ್-30 ಪಟ್ಟಿಗೆ ಮೈಸೂರು ಸೇರ್ಪಡೆಗೊಂಡಿದೆ. ಪ್ರತಿ ಬಾರಿ ಮಧ್ಯಮ ನಗರದಲ್ಲಿ ಪ್ರಥಮ, ದ್ವಿತೀಯ, ತೃತೀಯ ಅಥವಾ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದ ಮೈಸೂರಿಗೆ ಈ ಬಾರಿ ಕಡಿಮೆ ಸ್ಥಾನ ದೊರೆತಿದೆ.
ಕಳೆದ ಬಾರಿ ಎಂಟನೇ ಸ್ಥಾನದಲ್ಲಿದ್ದ ಮೈಸೂರು ನಗರವು ಈಗ 27ನೇ ಸ್ಥಾನಕ್ಕೆ ಇಳಿದಿರುವುದು ಮೈಸೂರು ನಗರದ ಜನತೆಯಲ್ಲಿ ನಿರಾಸೆ ಮೂಡಿಸಿದೆ. 3ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ತಿರುಪತಿಗೆ ಸಿಕ್ಕಿದ್ದರೆ, ಎರಡನೇ ಸ್ಥಾನ ಮೈಸೂರು ನಗರಕ್ಕೆ ಲಭಿಸಿದೆ.
ಕಳಪೆ ಸಾಧನೆ ತೋರಿದ ನಗರ
ಸಮಗ್ರ ವಿಭಾಗದಲ್ಲಿ ಸತತ 6ನೇ ಬಾರಿ ದೇಶದ ನಂ.1 ಸ್ವಚ್ಛ ನಗರಿಯಾಗಿ ಹೊರಹೊಮ್ಮಿದ್ದ ಮಧ್ಯಪ್ರದೇಶದ ಇಂದೋರ್ ನಗರ ಈ ಬಾರಿ ಸೂರತ್ ನಗರದೊಂದಿಗೆ (ತಲಾ 9348.39 ಅಂಕಗಳು) ಪ್ರಥಮ ಸ್ಥಾನವನ್ನು ಹಂಚಿಕೊಂಡಿದೆ. ನವಿಮುಂಬೈ 9240.27 ಅಂಕಗಳನ್ನು ಪಡೆದು 3ನೇ ಸ್ಥಾನ ಪಡೆದಿದೆ. ಮೈಸೂರು 7753.46 ಅಂಕಗಳನ್ನು ಕಲೆಹಾಕಿ 27ನೇ ಸ್ಥಾನ ಪಡೆದುಕೊಂಡಿದೆ.

ಕುಸಿತಕ್ಕೆ ಕಾರಣಗಳೇನು?
1. ಸ್ವಚ್ಛತೆ ಬಗ್ಗೆ ಜನರಿಂದ ಸಿಗದ ಫೀಡ್ ಬ್ಯಾಕ್
2. ಪೂರ್ಣ ಪ್ರಮಾಣದಲ್ಲಿ ಮನೆ ಮನೆ ಕಸ ಸಂಗ್ರಹ ಸಾಧ್ಯವಾಗದಿರುವುದು
3. ಅಗತ್ಯಕ್ಕೆ ತಕ್ಕಂತೆ ಎಸ್‌ಟಿಪಿ ಘಟಕ ಇಲ್ಲದಿರುವುದು
4. ಸಮರ್ಪಕವಾಗಿ ಕಸ ವಿಂಗಡಣೆಯಾಗದಿರುವುದು
5. ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿಯಾಗದಿರುವುದು
6. ಸ್ಥಾಪನೆಯಾಗದ ಡಬ್ರಿಸ್ ಸಂಸ್ಕರಣಾ ಘಟಕ
ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ
2015, 2016ರಲ್ಲಿ ಸತತ ಎರಡು ಬಾರಿ ಮೈಸೂರು ದೇಶದ ನಂ. 1 ಸ್ವಚ್ಛನಗರಿ ಪ್ರಶಸ್ತಿ ಮುಡಿಗೇರಿಸಿ ಕೊಂಡಿತ್ತು. 2018ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂ. 1 ಸ್ವಚ್ಛ ನಗರಿ ನಗರಿ ಪಟ್ಟ ಪಡೆದರೂ ಸಮಗ್ರ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. 2019ರಲ್ಲಿ ಸಮಗ್ರ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. 2020ರಲ್ಲಿ ಪ್ರಥಮ ಬಾರಿಗೆ ಬ್ಯಾಂಕಿಂಗ್ ಹಾಗೂ ಸ್ವಚ್ಛನಗರ ಪ್ರಶಸ್ತಿಯನ್ನು ಪ್ರತ್ಯೇಕವಾಗಿ ನೀಡಲಾಯಿತು. ಆ ವರ್ಷದಲ್ಲಿ ಸಮಗ್ರ ವಿಭಾಗದಲ್ಲಿ 5ನೇ ಸ್ಥಾನಕ್ಕೆ ಕುಸಿದ ಮೈಸೂರು ಮಧ್ಯಮ ನಗರ ವಿಭಾಗದಲ್ಲಿ (3ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಪಡೆದರೆ ಅದೇ ವಿಭಾಗದ ಬ್ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಪಡೆದುಕೊಂಡಿತ್ತು.












Click it and Unblock the Notifications