ಜಿಟಿಡಿ ನೇತೃತ್ವದಲ್ಲೇ ಎಂಎಲ್‌ಸಿ ಚುನಾವಣೆ ಎದುರಿಸುತ್ತೇವೆ: ಸಾ.ರಾ. ಮಹೇಶ್ ಅಚ್ಚರಿ ಹೇಳಿಕೆ
ಮೈಸೂರು, ನವೆಂಬರ್ 13: "ನಮ್ಮ ನಾಯಕರಾದ ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡರ ನೇತೃತ್ವದಲ್ಲೇ ವಿಧಾನ ಪರಿಷತ್ ಚುನಾವಣೆ ಎದುರಿಸಲಿದ್ದು, ಅವರ ಕುಟುಂಬದವರೇ ಅಭ್ಯರ್ಥಿ ಆದರೂ ಆಶ್ಚರ್ಯ ಪಡಬೇಕಿಲ್ಲ," ಎಂದು ಶಾಸಕ ಸಾ.ರಾ. ಮಹೇಶ್ ಮಾರ್ಮಿಕವಾಗಿ ನುಡಿದರು.
ಶನಿವಾರ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. "ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್‌ರನ್ನು ಜಿ.ಡಿ. ಹರೀಶ್ ಗೌಡ, ಮಾಜಿ ಸಂಸದರ ಪುತ್ರ, ಶಾಸಕ ಕೆ. ಮಹದೇವ್ ಪುತ್ರ ಚಾಮುಂಡಿ ಬೆಟ್ಟದಲ್ಲಿ ಬರಮಾಡಿಕೊಂಡಿದ್ದಾರೆ. ಹೀಗಾಗಿ ಜಿ.ಟಿ. ದೇವೇಗೌಡರು ಇಂದಿಗೂ ನಮ್ಮ ಪಕ್ಷದ ಶಾಸಕರೇ ಆಗಿದ್ದಾರೆ. ಹೀಗಾಗಿ ಇನ್ನೊಂದೆರಡು ದಿನಗಳಲ್ಲಿ ಪಕ್ಷದ ಸಭೆ ನಡೆಸಿ ಅವರ ಕುಟುಂಬದಿಂದಲೇ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಚರ್ಚೆಗಳು ನಡೆಯುತ್ತವೆ," ಎಂದರು.
"ಅವರು ಇಂದಿಗೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಹೀಗಾಗಿ ಅವರಿಗಾಗಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಶೀಘ್ರವೇ ಅವರೊಂದಿಗೂ ಚರ್ಚಿಸಲಾಗುವುದು. ಜಿಟಿಡಿ ನೇತೃತ್ವದಲ್ಲಿಯೇ ಚುನಾವಣೆ ನಡೆಸುತ್ತೇವೆ. ಕಾಂಗ್ರೆಸ್‌ಗೆ ನಮ್ಮ ಪಕ್ಷದ ಶಾಸಕರ ನೇತೃತ್ವದಲ್ಲಿ ಚುನಾವಣೆ ಎದುರಿಸುವ ದುಸ್ಥಿತಿ ಬಂದಿದೆ," ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಜೆಡಿಎಸ್ ತೊರೆಯಲು ಮುಂದಾಗಿರುವ ಹಿನ್ನೆಲೆ ಪ್ರತಿಕ್ರಿಯಿಸಿ, "ಸಂದೇಶ್ ನಾಗರಾಜ್ ಅವರು ಯಾವತ್ತು ಚುನಾವಣೆ ಆಯಿತೋ ಅಂದಿನಿಂದ ನಮ್ಮ ಜೊತೆ ಎಲ್ಲಿದ್ದಾರೆ. ಅವರು ನಮ್ಮ ಜೊತೆ ಗುರುತಿಸಿಕೊಂಡಿಲ್ಲ. ಈಗ ಆ ವಿಚಾರ ಅಪ್ರಸ್ತುತ. ಸಂದೇಶ್ ನಾಗರಾಜ್‌ರಿಂದ ತೆರವಾಗುವ ಸ್ಥಾನಕ್ಕೆ ಎದುರಾಗಿರುವ ಚುನಾವಣೆಗೆ ಸಜ್ಜಾಗಿದ್ದೇವೆ. ನಮ್ಮ ಪಕ್ಷದಲ್ಲಿ ಐದು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕಡೆಗೆ ಅಚ್ಚರಿಯ ಅಭ್ಯರ್ಥಿಯ ಆಯ್ಕೆಯಾಗಬಹುದು. ನಮ್ಮ ಪಕ್ಷದ ಜನಪ್ರತಿನಿಧಿಗಳು ಮೈಸೂರು ಜಿಲ್ಲೆಯಲ್ಲಿ ಹೆಚ್ಚಿರುವುದರಿಂದ ಗೆಲ್ಲುತ್ತೇವೆ," ಎಂದು ಸಾ.ರಾ. ಮಹೇಶ್ ತಿಳಿಸಿದರು.
ಬಿಟ್ ಕಾಯಿನ್ ಹಗರಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಬಿಟ್ ಕಾಯಿನ್ ಅಂದರೇನೆ ಗೊತ್ತಾಗಿದ್ದು 15 ದಿನದ ಹಿಂದೆ. ನನಗೆ ಬಿಟ್ ಕಾಯಿನ್ ಗೊತ್ತಿಲ್ಲ. ಅದರ ಬೆಲೆಯೂ ಗೊತ್ತಿಲ್ಲ. ಜನರಿಗೆ ವೈಟ್ ಮನಿ, ಬ್ಲಾಕ್ ಮನಿ ಗೊತ್ತಿತ್ತು. ಆದರೆ ಬಿಟ್ ಮನಿ ಗೊತ್ತಿರಲಿಲ್ಲ. ಈಗ ಗೊತ್ತಾಗುತ್ತಿದೆ ಎಂದರು.
ಇದೇ ವೇಳೆ ಉದ್ಯಮಿಗಳು ತೆರಿಗೆ ಕಟ್ಟಿಲ್ಲವೆಂದು ಮೈಸೂರು ಮಹಾನಗರ ಪಾಲಿಕೆ ತೆರಿಗೆ ಬಾಕಿ ಬೋರ್ಡ್ ಹಾಕಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಮೈಸೂರು ಪಾಲಿಕೆ ತುಘಲಕ್ ದರ್ಬಾರ್ ನಡೆಯುತ್ತಿದೆ. ಮೈಸೂರಿನಲ್ಲಿ ನಿಯಮ ಮೀರಿ ತೆರಿಗೆ ವಸೂಲಿ ನಡೆಯುತ್ತಿದೆ ಎಂದು ಆರೋಪಿಸಿದರು. ಬೆಂಗಳೂರಿನಲ್ಲಿಯೂ ಈ ಮಟ್ಟದ ಟ್ಯಾಕ್ಸ್ ಹಾಕುತ್ತಿಲ್ಲ. ಆದರೆ ಮೈಸೂರಿನಲ್ಲಿ ಹೆಚ್ಚುವರಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಹೆಚ್ಚುವರಿ ತೆರಿಗೆ ವಸೂಲಿಗೆ ಅಧಿಕಾರ ಕೊಟ್ಟವರು ಯಾರು? ಈಗಾಗಲೇ ಮೈಸೂರಿನಲ್ಲಿ 8 ಚಿತ್ರಮಂದಿರ ಮುಚ್ಚಿವೆ, ಉದ್ಯಮಗಳು ನಾಶವಾಗುತ್ತಿವೆ. ಪಾಲಿಕೆ ಮನಸೋ ಇಚ್ಛೆ ಟ್ಯಾಕ್ಸ್ ಹಾಕಿದರೆ ಸಾರ್ವಜನಿಕರ ಪರಿಸ್ಥಿತಿ ಏನು? ನನ್ನ ಕನ್ವೆನ್ಶನ್ ಹಾಲ್‌ಗೆ ನಿಯಮದ ಪ್ರಕಾರ 4 ಲಕ್ಷ ತೆರಿಗೆ ವಿಧಿಸಬೇಕು. ಆದರೆ ಮೈಸೂರು ಪಾಲಿಕೆ 8.75 ಲಕ್ಷ ರೂ. ತೆರಿಗೆ ವಿಧಿಸಿದೆ. ಅಧಿಕ ತೆರಿಗೆ ವಸೂಲಿ ಬಗ್ಗೆ ಸಾಕಷ್ಟು ಉದ್ಯಮಿಗಳು ಕೋರ್ಟ್ ಮೊರೆ ಹೋಗಿದ್ದಾರೆ.
ಹಾಗಾಗಿ ಕಳೆದ 5-6 ವರ್ಷದಿಂದ ಟ್ಯಾಕ್ಸ್ ಕಟ್ಟಿಲ್ಲ. ನಿಯಮದಂತೆ ತೆರಿಗೆ ವಿಧಿಸಿದರೆ ಎಲ್ಲರೂ ತೆರಿಗೆ ಕಟ್ಟುತ್ತಾರೆ. ಆದರೆ ನೀವು ಕಾನೂನು ಬಾಹಿರವಾಗಿ ದಬ್ಬಾಳಿಕೆ ಮಾಡಿದರೆ ತಪ್ಪು. ಅಲ್ಲದೇ ಟ್ಯಾಕ್ಸ್ ಕಟ್ಟಿಲ್ಲ ಅಂತ ಬೋರ್ಡ್ ಹಾಕಿ ಅವಮಾನಿಸುವುದು ಸರಿಯಲ್ಲ. ನೀವು ಕಾನೂನು ರೀತಿಯ ತೆರಿಗೆ ವಿಧಿಸಿದರೆ ಆ್ಯಕ್ಟ್‌ನಲ್ಲಿರುವ ನಿಯಮದಂತೆ ವಿಧಿಸಿದರೆ ಕಟ್ಟಲು ಸಿದ್ಧರಿದ್ದಾರೆ. ಕಾನೂನು ಬಾಹಿರ ಟ್ಯಾಕ್ಸ್ ಮಾಡಿ ಕಟ್ಟದ ಸಂದರ್ಭದಲ್ಲಿ ಬ್ಯಾನರ್ ಹಿಡಿದುಕೊಂಡು ಹೋಗಿ ಅವರ ಮೇಲೆ ದಬ್ಬಾಳಿಕೆ ಮಾಡಿದರೆ ಇದರಿಂದ ಶಾಂತಿ ಭಂಗವಾದರೆ, ಕಾನೂನು ಸುವ್ಯವಸ್ಥೆ ಹಾಳಾದರೆ ಪಾಲಿಕೆಯೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.
ಈ ಸಂಬಂಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆಯಬೇಕು. ಸಭೆಯಲ್ಲಿ ಚರ್ಚಿಸಿ ಕಾನೂನಾತ್ಮಕವಾಗಿ ತೆರಿಗೆ ವಿಧಿಸಬೇಕು. ಒಂದು ವಾರದೊಳಗೆ ಸಭೆ ಕರೆದು ಸಮಸ್ಯೆ ಸರಿಪಡಿಸಬೇಕು. ಇಲ್ಲದಿದ್ದರೆ ಜೆಡಿಎಸ್ ಪಾಲಿಕೆ ಸದಸ್ಯರ ಜೊತೆ ಮೈಸೂರು ಮಹಾನಗರ ಪಾಲಿಕೆ ಬಳಿ ಪ್ರತಿಭಟನೆ ನಡೆಸುತ್ತೇವೆ. ಆಗದಿದ್ದರೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದರು.