ಪಬ್‌ಜಿ ಆಡಲು ಪೋಷಕರ ಖಾತೆಯಿಂದ 10 ಲಕ್ಷ ವಿತ್‌ಡ್ರಾ ಮಾಡಿದ ಬಾಲಕ!
ಮುಂಬೈ, ಆಗಸ್ಟ್ 28: ತನ್ನ ಪೋಷಕರ ಬ್ಯಾಂಕ್ ಖಾತೆಯಿಂದ 16 ವರ್ಷ ಪ್ರಾಯದ ಅಪ್ರಾಪ್ತ ಬಾಲಕನೊಬ್ಬ ಸುಮಾರು ಹತ್ತು ಲಕ್ಷ ಹಣವನ್ನು ವಿತ್‌ಡ್ರಾ ಮಾಡಿಕೊಂಡು ಆ ಹಣವನ್ನು ಪಬ್ ಜಿ ವರ್ಚುವಲ್ ಗೇಮ್ ಅಲ್ಲಿ ವರ್ಚುವಲ್ ಕ್ಯಾಶ್ ಖರೀದಿ ಮಾಡಲು ಬಳಸಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿದೆ.
ಈ ಪಬ್ ಜಿ ಆಟದ ಚಟಕ್ಕೆ ಒಳಗಾಗಿರುವ ಈ 16 ವರ್ಷ ಪ್ರಾಯದ ಬಾಲಕನು ತಾನು ಬರೋಬ್ಬರಿ ಹತ್ತು ಲಕ್ಷ ಹಣವನ್ನು ಪಬ್ ಜಿ ಆನ್‌ಲೈನ್ ಗೇಮ್‌ನಲ್ಲಿ ಬಳಸಿಕೊಂಡಿದ್ದೇನೆ ಎಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ಆಕ್ರೋಶಕ್ಕೆ ಒಳಗಾದ ಪೋಷಕರು 10 ಲಕ್ಷ ಹಣವನ್ನು ಗೇಮ್‌ಗೆ ಹಾಕಿದ್ದಕ್ಕೆ ಬಾಲಕನಿಗೆ ಬೈದಿದ್ದಾರೆ. ಈ ಹಿನ್ನೆಲೆ ಬಾಲಕ ತನ್ನ ಮನೆಯನ್ನು ಬಿಟ್ಟು ಹೋಗಿದ್ದಾನೆ ಎಂದು ಹೇಳಲಾಗಿದೆ.
ಈ ಬಾಲಕನ ಮನೆಯು ಜೋಗೇಶ್ವರಿಯ ಒಳ ನಗರ ಪ್ರದೇಶದಲ್ಲಿದೆ ಎಂದು ಮಾಧ್ಯಮದ ವರದಿಗಳು ಹೇಳಿದೆ. ಇನ್ನು ಬಾಲಕ ಮನೆಯನ್ನು ತೊರೆದು ಹೋಗುವ ಮೊದಲು ಪತ್ರವೊಂದನ್ನು ಬರೆದು ಇಟ್ಟು ಹೋಗಿದ್ದಾನೆ ಎಂದು ಹೇಳಲಾಗಿದೆ. ಬಾಲಕ ಮನೆ ತೊರೆದು ಹೋಗಿರುವ ಹಿನ್ನೆಲೆ ಪೋಷಕರು ಎಮ್‌ಐಡಿಸಿ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲು ಮಾಡಿದ್ದಾರೆ. ಹಾಗೆಯೇ ಪೊಲೀಸರಿಗೆ ಮಗ ಪತ್ರವನ್ನು ಬರೆದಿಟ್ಟು ಹೋಗಿದ್ದಾನೆ ಎಂದು ತಿಳಿಸಿದ್ದಾರೆ.

ಇನ್ನು ಈ 16 ವರ್ಷ ಪ್ರಾಯದ ಬಾಲಕನು ಮನೆ ತೊರೆಯುವ ಮುನ್ನ ಬರೆದ ಪತ್ರದಲ್ಲಿ, "ನಾನು ಮನೆಯನ್ನು ತೊರೆದು ಹೋಗುತ್ತಿದ್ದೇನೆ, ಹಾಗೂ ಹಿಂದಿರುಗಿ ಬರುವುದಿಲ್ಲ," ಎಂದು ತಿಳಿಸಿದ್ದಾನೆ ಎಂದು ಪೋಷಕರು ಪೊಲೀಸರಿಗೆ ಹೇಳಿದ್ದಾರೆ. ಸ್ಥಳೀಯ ಪೊಲೀಸರು ಈ ನಾಪತ್ತೆ ಪ್ರಕರಣವನ್ನು ಕ್ರೈ ಬ್ರಾಂಚ್‌ಗೆ ವರ್ಗಾವಣೆ ಮಾಡಿದ್ದಾರೆ.
ಈ ಬಾಲಕನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಬಾಲಕನ ಸ್ನೇಹಿತರು ಹಾಗೂ ತರಗತಿಯ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಹಾಗೂ ಸಿಸಿ ಟಿವಿ ದೃಶ್ಯವನ್ನು ಪರಿಶೀಲನೆ ನಡೆಸಿ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿದ್ದಾರೆ. ಬಾಲಕನು ತನ್ನ ನಿವಾಸಿದಿಂದ ಕೊಂಚ ದೂರದಲ್ಲಿರುವ ಮಹಾಕಾಳಿ ಕೇವ್ ರೋಡ್‌ನಲ್ಲಿ ಪತ್ತೆಯಾಗಿದ್ದಾನೆ ಎಂದು ವರದಿಗಳು ತಿಳಿಸಿದೆ.
ಪೋಷಕರು ತಮ್ಮ ಪುತ್ರನಿಗೆ ಪಬ್ ಜಿ ಆನ್‌ಲೈನ್ ಆಟದ ಎಷ್ಟು ಗೀಳು ಇದೆ ಹಾಗೂ ಈ ಗೀಳಿನಿಂದಾಗಿ ತಮ್ಮಲ್ಲಿ ಅನುಮತಿ ಪಡೆಯದೆಯೇ ಭಾರೀ ಪ್ರಮಾಣದ ಹಣವನ್ನು ಖರ್ಚು ಮಾಡಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ನಂತರ ಪೋಷಕರು ಹಾಗೂ ಬಾಲಕನ ಬಳಿ ಪೊಲೀಸರ ತಂಡವು ಮಾತನಾಡಿ ಸಲಹೆಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.
ಇಂತಹುದ್ದೆ ಘಟನೆ ಈ ಹಿಂದೆ ಪಂಜಾಬ್‌ನಲ್ಲಿ ನಡೆದಿದೆ. ಪಬ್ ಜಿ ಆಡಲಿಕ್ಕಾಗಿ 17 ವರ್ಷದ ಬಾಲಕನೋರ್ವ 16 ಲಕ್ಷ ರೂಪಾಯಿ ವ್ಯಯ ಮಾಡಿದ್ದಾನೆ. ಪಬ್‌ಜಿ ಗೇಮ್‌ನಲ್ಲಿನ ವಿವಿಧ ರೀತಿಯ ಪರ್ಚೇಸ್, ಆಯುಧ ಖರೀದಿ, ಗೇಮ್ ಅಪ್‌ಗ್ರೇಡ್ ಎಂದು ಹೇಳಿಕೊಂಡು ಈ ಬಾಲಕ ವಿವಿಧ ಸಂದರ್ಭದಲ್ಲಿ ಮೂರು ಬ್ಯಾಂಕ್ ಅಕೌಂಟ್ ಬಳಸಿಕೊಂಡು16 ಲಕ್ಷ ರೂ. ಖರ್ಚು ಮಾಡಿದ್ದಾನೆ. ಬಾಲಕ ಓದುವುದರಲ್ಲಿ ಹಿಂದೆ ಬಿದ್ದು ಪಬ್‌ಜಿ ಆಟವನ್ನೇ ಆಡುತ್ತಿದ್ದ ಹಿನ್ನೆಲೆ ಪೋಷಕರು ಆತನ ಮೊಬೈಲ್ ಅನ್ನು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಆತನ 16 ಲಕ್ಷ ರೂಪಾಯಿ ಪಬ್ ಜಿಗೆ ವ್ಯಯ ಮಾಡಿರುವುದು ಕಂಡು ಬಂದಿದೆ. ಅಲ್ಲಿಯವರೆಗೂ ಪೋಷಕರಿಗೆ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಹೋಗುತ್ತಿರುವುದು ಗೊತ್ತೇ ಇರಲಿಲ್ಲ. ಈ ಚಾಲಕಿ ಬಾಲಕ ತನ್ನ ಪೋಷಕರ ಬ್ಯಾಂಕ್ ಖಾತೆಯಿಂದ ಹಣ ವಿತ್ ಡ್ರಾ ಆದ ಸಂದೇಶ ಬರುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿದ್ದಾನೆ ಎಂದು ಹೇಳಲಾಗಿದೆ. ಇನ್ನು ಈ ಬಾಲಕನು ತಂದೆ ತಾಯಿಯ ಬ್ಯಾಂಕ್ ಖಾತೆಯಿಂದ ಮಾತ್ರವಲ್ಲದೇ ತಂದೆಯ ಪಿಎಫ್ ಖಾತೆಯಿಂದಲೂ ಹಣವನ್ನು ತೆಗೆದಿದ್ದಾನೆ ಎಂದು ಹೇಳಲಾಗಿದೆ. ಆದರೆ ತಂದೆಯ ಗಮನಕ್ಕೆ ಬಾರದೆ ಹೇಗೆ ತೆಗೆದಿದ್ದಾನೆ ಎಂಬುವುದು ಆಶ್ಚರ್ಯಕರ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications