ಬಿಹಾರ ಚುನಾವಣೆ; ಸ್ಥಳೀಯ ಪಕ್ಷಗಳ ಜೊತೆ ಶಿವಸೇನೆ ಮೈತ್ರಿ?
ಮುಂಬೈ, ಅಕ್ಟೋಬರ್ 13: " ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ 40-45 ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ. ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ" ಎಂದು ಪಕ್ಷದ ನಾಯಕ ಸಂಜಯ್ ರಾವತ್ ಹೇಳಿದರು.
ಮಂಗಳವಾರ ಮುಂಬೈನಲ್ಲಿ ಮಾತನಾಡಿದ ಅವರು, "ಬಿಹಾರದ ಹಲವು ಪ್ರಾದೇಶಿಕ ಪಕ್ಷಗಳು ಮೈತ್ರಿಗಾಗಿ ಪಕ್ಷದ ಜೊತೆ ಮಾತುಕತೆ ನಡೆಸುತ್ತಿವೆ. ಮುಂದಿನ ವಾರ ಬಿಹಾರಕ್ಕೆ ಭೇಟಿ ನೀಡುತ್ತೇನೆ" ಎಂದರು.
ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷ ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಹಾರದಲ್ಲಿಯೂ ಈ ಮೈತ್ರಿ ಮುಂದುವರೆಯಲಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಲು ಸಂಜಯ್ ರಾವತ್ ನಿರಾಕರಿಸಿದರು.

"ಬಿಹಾರದಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಇದುವರೆಗೂ ಯಾವ ಪಕ್ಷದೊಂದಿಗೂ ಮಾತುಕತೆ ನಡೆಸಿಲ್ಲ. ಮುಂದಿನ ವಾರ ಪಾಟ್ನಾಕ್ಕೆ ಭೇಟಿ ನೀಡುತ್ತಿದ್ದೇನೆ. ಸ್ಥಳೀಯ ಪಕ್ಷಗಳು ಸೇರಿದಂತೆ ಪಪ್ಪು ಯಾದವ್ ಜೊತೆ ಮಾತುಕತೆ ನಡೆಯಲಿದೆ" ಎಂದು ಸಂಜಯ್ ರಾವತ್ ಸ್ಪಷ್ಟಪಡಿಸಿದರು.
ಬಿಹಾರದಲ್ಲಿ ಈಗಾಲಗೇ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸುವುದಾಗಿ ಘೋಷಣೆ ಮಾಡಿದೆ. ಆದರೆ, ಬಿಜೆಪಿ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ಬಯಸಿದೆ.
ಆರ್‌ಜೆಡಿ ಮಹಾಘಟಬಂಧನ್ ಮುನ್ನಡೆಸುತ್ತಿದ್ದು ಕಾಂಗ್ರೆಸ್ ಮತ್ತು ಎಡಪಕ್ಷಗಳು ಇವುಗಳಲ್ಲಿ ಸೇರಿಕೊಂಡಿವೆ. ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಯು ಮತ್ತು ಬಿಜೆಪಿ ಪಕ್ಷಗಳಿವೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಮತದಾನ ನಡೆಯಲಿದ್ದು, ನವೆಂಬರ್ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications