ಮುಂಬೈ ಅಪ್ರಾಪ್ತ ಬಾಲಕಿ ರೇಪ್ ಮರ್ಡರ್: ಗಲ್ಲು ಪ್ರಕಟ

ಗೊರೆಗಾಂವ್ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಜೋಶಿ ಫಾಲ್ಕೆ ಅವರು ಪಕ್ಕದ ಮನೆಯ ಮಗುವಿನ ಮೇಲೆ ಪೈಶಾಚಿಕ ಅಪರಾಧವೆಸಗಿದ್ದ ಬಾಬಾ ಸಾಹೇಬನಿಗೆ ಗಲ್ಲು ಶಿಕ್ಷೆ ಪ್ರಕಟಿಸಿದರು.
2011ರ ಅಕ್ಟೋಬರ್ 28ರಂದು ತೀನ್ ದೊಂಗ್ರಿಯ ಕ್ರಾಂತಿ ನಗರ ಕೊಳಚೆ ಪ್ರದೇಶದಲ್ಲಿ 55 ವರ್ಷದ ಬಾಬಾ ಸಾಹೇಬ, 7 ವರ್ಷದ ಬಾಲಕಿಯ ಮೇಲೆ ಹೇಯ ಕೃತ್ಯವೆಸಗಿ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದ. ನಂತರ ಸಿಕ್ಕಿಬೀಳುವ ಭೀತಿಯಿಂದ ಬಾಲಕಿಯ ಶವವನ್ನು ತನ್ನ ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದ.
ಅಂದು ಏನಾಗಿತ್ತೆಂದರೆ ಬಾಲಕಿ ಎಷ್ಟೊತ್ತಾದರೂ ಮನೆಗೆ ವಾಪಸಾಗದಿದ್ದಾಗ ಆಕೆಯ ತಾಯಿ ಮಗುವಿವಾಗಿ ಹುಡುಕಾಟ ನಡೆಸಿದರು. ಆಗ ಪಕ್ಕದ ಮನೆಯ ಮುಂದೆಯೇ ಬಾಲಕಿಯ ಚಪ್ಪಲಿಗಳು ಬಿದ್ದಿರುವುದನ್ನು ಗಮನಿಸಿದರು. ಅದು ಬಾಬಾ ಸಾಹೇಬ ಕಾಂಬ್ಲೆಯ ಮನೆಯಾಗಿತ್ತು. ತಕ್ಷಣ ಬಾಲಕಿಯ ತಾಯಿ ಮನೆಯ ಬಾಗಿಲು ಬಡಿಯಲಾರಂಭಿಸಿದಳು.
ಆದರೆ ಎಷ್ಟು ಹೊತ್ತಾದರೂ ತೆರೆಯದಿದ್ದಾಗ ಆತಂಕ ಹೆಚ್ಚಾಗಿ ಬಾಗಿಲು ಮುರಿದು ಒಳಹೊಕ್ಕರು. ಆದರೆ ಅಲ್ಲಿ ಮಗು ಕಾಣಲಿಲ್ಲ. ಬದಲಿಗೆ ಬಾಬಾ ಸಾಹೇಬ ತನ್ನ ಹಾಸಿಗೆಯ ಮೇಲೆ ಮಲಗಿದ್ದ. ಅನುಮಾನ ಹೆಚ್ಚಾಗಿ ಹಾಸಿಗೆಯತ್ತ ಮತ್ತೊಮ್ಮೆ ನೋಟ ಹರಿಸಿದಾಗ ಅಲ್ಲಿ ರಕ್ತದ ಕಲೆಗಳು ಗೋಚರಿಸಿವೆ. ತಕ್ಷಣ ಹಾಸಿಗೆಯನ್ನು ಸರಿಸಿ ನೋಡಿದಾಗ ಮಗಳ ಶವ ಪತ್ತೆಯಾಗಿತ್ತು.
ಪ್ರಕರಣದಲ್ಲಿ ಪೊಲೀಸ್ ತನಿಖೆಯನ್ನು ಶ್ಲಾಘಿಸಿದ ಕೋರ್ಟ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಮಾಧುರಿ ಮಹಾಜನ್ ಕಠಿಣ ಸಂದರ್ಭದಲ್ಲಿ ಸಾಕ್ಷ್ಯಗಳನ್ನು ಒದಗಿಸಿ, ಪ್ರಕರಣಕ್ಕೆ ನ್ಯಾಯೋಚಿತ ಅಂತ್ಯ ದೊರಕಿಸಿಕೊಟ್ಟಿದ್ದಾರೆ ಎಂದಿದ್ದಾರೆ.
ಇಂತಹ ರೇಪಿಸ್ಟುಗಳಿಗೆ ಗಲ್ಲು ಶಿಕ್ಷೆಯಾಗುತ್ತಿದ್ದರೆ ಅತ್ಯಾಚಾರ ಪ್ರಕರಣಗಳು ಗಣನೀಯವಾಗಿ ತಗ್ಗಬಹುದು ಎಂದೂ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಧುರಿ ಆಶಿಸಿದ್ದಾರೆ.












Click it and Unblock the Notifications