ಮುಂಬೈನಲ್ಲಿ ಮತ್ತೆ ಮಹಾ ಮಳೆ, ಬುಧವಾರ ಶಾಲೆ-ಕಾಲೇಜು ರಜಾ
ಮುಂಬೈ, ಸೆಪ್ಟೆಂಬರ್ 19: ಮುಂಬೈನಲ್ಲಿ ಮಂಗಳವಾರ ಮಧ್ಯಾಹ್ನದಿಂದ ಭಾರೀ ಮಳೆಯಾಗುತ್ತಿದೆ. ಇದೇ ಪ್ರಮಾಣದ ಮಳೆ ಇನ್ನೂ ಹದಿನೈದು ಗಂಟೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯವರು ಸೂಚನೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಮುಂಬೈ ವ್ಯಾಪ್ತಿಯ ಎಲ್ಲ ಶಾಲೆ-ಕಾಲೇಜುಗಳಿಗೆ ಬುಧವಾರ ರಜಾ ಘೋಷಣೆ ಮಾಡಲಾಗಿದೆ.
ದಕ್ಷಿಣ ಮುಂಬೈ, ಕಂಡಿವಿಲಿ, ಬೊರಿವಿಲಿ, ಅಂಧೇರಿ ಮತ್ತು ಭಾಂದಪ್ ನಲ್ಲಿ ಭಾರೀ ಮಳೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಆದರೆ ಮಳೆಯಿಂದಾಗಿ ಸಂಚಾರಕ್ಕೆ ಅಂಥ ಸಮಸ್ಯೆಯೇನೂ ಆಗಿಲ್ಲ ಮತ್ತು ಸಬ್ ಅರ್ಬನ್ ರೈಲು ಸೇವೆಯಲ್ಲೂ ವ್ಯತ್ಯಯವಾಗಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ.

ಮಂಗಳವಾರ ಮಧ್ಯಾಹ್ನ ಗುಡುಗು ಹಾಗೂ ಮಿಂಚಿನ ಸಹಿತ ಭಾರೀ ಮಳೆಯಾಗಿದೆ. ಕೆಲವು ಕಡೆ ಮರಗಳು ನೆಲಕ್ಕುರುಳಿವೆ. ಇನ್ನು ತಗ್ಗು ಪ್ರದೇಶದ ಕೆಲವೆಡೆ ನೀರು ನುಗ್ಗಿದೆ. ಈ ಮಧ್ಯೆ ವಿಮಾನ ಸಂಚಾರದಲ್ಲೂ ವ್ಯತ್ಯಯವಾಗಿದೆ. ವಿಮಾನ ನಿಲ್ದಾಣದ ರನ್ ವೇ ಅನ್ನು ಬಂದ್ ಮಾಡಲಾಗಿತ್ತು ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications