ಹುಟ್ಟುಹಬ್ಬ ಆಚರಿಸಬೇಕೇ? ಮೋನೋರೈಲು ಬುಕ್ ಮಾಡಿಕೊಳ್ಳಿ
ಮುಂಬೈ, ಮಾರ್ಚ್ 03: ಅರೇ ಇದೇನಿದು, ಹುಟ್ಟುಹಬ್ಬ ಆಚರಣೆ ಎಂದರೆ ಹೋಟೆಲ್, ರೆಸ್ಟೋರೆಂಟ್, ಪಬ್, ರೆಸಾರ್ಟ್ ಬುಕ್ ಮಾಡಿಕೊಳ್ಳೋ ಈ ಕಾಲದಲ್ಲಿ ಮೋನೋರೈಲು ಬುಕ್? ಎಂಬ ಕುತೂಹಲ ಮೂಡುತ್ತಿದೆಯೇ? ಇಂಥದ್ದೊಂದು ಆಫರ್ ನೀಡಲು ಮುಂಬೈ ಮೆಟ್ರೋಪಾಲಿಟನ್ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ(ಎಂಎಂಆರ್ ಡಿಎ) ಮುಂದಾಗಿದೆ.
ಮೋನೋರೈಲುಗಳನ್ನು ಹುಟ್ಟುಹಬ್ಬ, ಮದುವೆ ಮುಂತಾದ ಶುಭಕಾರ್ಯಗಳಿಗೆ ಬುಕ್ ಮಾಡಿಕೊಂಡು, ಸಂಭ್ರಮಾಚರಣೆಯಲ್ಲಿ ತೊಡಗಬಹುದು ಎಂದು ಎಂಎಂಆರ್ ಡಿಎ ಹೇಳಿದೆ. ಮೋನೋರೈಲು ಬಾಡಿಗೆಗೆ ನೀಡುವ ಹೊಸ ಐಡಿಯಾ ಕೇಳಿ ಸಾರ್ವಜನಿಕರು ಥ್ರಿಲ್ ಆಗಿದ್ದಾರೆ.
ಆದರೆ, ಮೋನೋರೈಲುಗಳನ್ನು ಪೀಕ್ ಅವರ್ ಗಳಲ್ಲಿ ಪಡೆಯಲು ಸಾಧ್ಯವಿಲ್ಲ. ಸದ್ಯ ನಷ್ಟದಲ್ಲಿರುವ ಸಂಸ್ಥೆಯನ್ನು ಲಾಭದ ಹಾದಿಗೆ ತರಲು ಎಂಎಂಆರ್ ಡಿಎ ಈ ರೀತಿ ನಿರ್ಧಾರ ಕೈಗೊಂಡಿದೆ ಎಂದು ಎಂಎಂಆರ್ ಡಿಎ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ.

ಮೋನೋರೈಲು ಪ್ರತಿ ದಿನ 8.5 ಲಕ್ಷ ರು ನಷ್ಟ ಅನುಭವಿಸುತ್ತಿದೆ. ಇಲ್ಲಿ ತನಕ 38 ಲಕ್ಷ ಮಂದಿ ಮಾತ್ರ ಪ್ರಯಾಣಿಸಿದ್ದಾರೆ. ಜನವರಿ 2020ರಲ್ಲಿ 19.5 ಕಿ.ಮೀ ಕಾರಿಡಾರ್ 2.75 ಲಕ್ಷ ಪ್ರಯಾಣಿಕರನ್ನು ಕಂಡಿದೆ. ಮಾರ್ಚ್ 2019ರಲ್ಲಿ 96.29 ಲಕ್ಷ ರು, ಜನವರಿ 2020ರಲ್ಲಿ 55.52 ಲಕ್ಷ ರು ಮಾತ್ರ ಗಳಿಸಿದೆ ಎಂದು ಮೆಟ್ರೋಪಾಲಿಟನ್ ಆಯುಕ್ತ ಪಿಎ ರಾಜೀವ್ ಅವರು ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಒಟ್ಟಾರೆ, ಬಿಳಿಯಾನೆ ಸಾಕುವಂಥ ಪರಿಸ್ಥಿತಿಯಲ್ಲಿರುವ ಎಂಎಂಆರ್ ಡಿಎ ಈಗ ಬಾಡಿಗೆ ಐಡಿಯಾ ಮಾಡಿ ಲಾಭ ಗಳಿಸುವ ಚಿಂತನೆಯಲ್ಲಿದೆ.












Click it and Unblock the Notifications