ಮುಂಬೈ: ಫೆ.1ರಿಂದ ಸ್ಥಳೀಯ ರೈಲುಗಳ ಸಂಚಾರ ಶುರು
ಮುಂಬೈ, ಜನವರಿ 29: ಕೊರೊನಾ ಸೋಂಕು ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ರದ್ದುಗೊಂಡಿದ್ದ ಮುಂಬೈ ಸ್ಥಳೀಯ ರೈಲುಗಳ ಸಂಚಾರ ಫೆಬ್ರವರಿ 1 ರಿಂದ ಪುನರಾರಂಭಗೊಳ್ಳಲಿದೆ.
ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಚೇರಿ ಮೂಲಗಳು ತಿಳಿಸಿವೆ. ಸ್ಥಳೀಯ ರೈಲು ಸಂಚಾರ ಪುನಾರಂಭದೊಂದಿಗೆ ನಿತ್ಯ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರಿಗೆ ಇದರಿಂದ ಅನುಕೂಲ ಕಲ್ಪಿಸಿದಂತಾಗಿದೆ.
ಮಹಾರಾಷ್ಟ್ರ ಸರ್ಕಾರ ಹೊರಿಡಿಸಿರುವ ಆದೇಶದ ಪ್ರಕಾರ, ಸಾರ್ವಜನಿಕರಿಗೆ ಸ್ಥಳೀಯ ರೈಲು ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 9ರವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.

ಜನವರಿ 28ರ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ 20,18,413 ಕೊರೊನಾ ಸೋಂಕಿತರಿದ್ದು, ಈವರೆಗೆ ಸೋಂಕಿನಿಂದಾಗಿ 50,944 ಮಂದಿ ಸಾವನ್ನಪ್ಪಿದ್ದಾರೆ.
ರೈಲು ಸಂಚಾರದ ಸಮಯಕ್ಕೆ ಸರ್ಕಾರ ಅನುಮತಿ ನೀಡಿದ್ದು, ಈ ಬಗ್ಗೆ ಪಶ್ಚಮ ರೈಲ್ವೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವರದಿ ಹೇಳಿದೆ. ಕೊರೊನಾ ಸೋಂಕಿನ ಪರಿಣಾಮ ಮಾರ್ಚ್ 23ರಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.












Click it and Unblock the Notifications