ನಿರ್ದೇಶಕನ ಹತ್ಯೆಗೆ ಸಂಚು ರೂಪಿಸಿದ್ದ ಮಾಡೆಲ್ ಗೆ ಶಿಕ್ಷೆ
ಹಿಂದಿ ಚಿತ್ರರಂಗದ ಪ್ರಬುದ್ಧ ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ಹತ್ಯೆ ಸಂಚಿನ ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಮಾಡೆಲ್ ಪ್ರೀತಿ ಜೈನ್ ಅವರಿಗೆ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.
ಮುಂಬೈ, ಏಪ್ರಿಲ್ 28: ಹಿಂದಿ ಚಿತ್ರರಂಗದ ಪ್ರಬುದ್ಧ ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ಹತ್ಯೆ ಸಂಚಿನ ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಮಾಡೆಲ್ ಪ್ರೀತಿ ಜೈನ್ ಅವರಿಗೆ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.
ಮುಂಬೈ ಸೆಷನ್ಸ್ ನ್ಯಾಯಾಲಯವು ಶುಕ್ರವಾರದಂದು ಪ್ರೀತಿ ಜೈನ್ ಅವರಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿದೆ.

ನಿರ್ದೇಶಕ ಮಧುರ್ ಭಂಡಾರ್ಕರ್ ವಿರುದ್ಧ ಅತ್ಯಾಚಾರ ಆರೋಪ ಹೊರೆಸಿದ್ದ ಪ್ರೀತಿ ಅವರು ನಂತರ ಇನ್ನಿಬ್ಬರ ಜತೆಗೂಡಿ ಮಧುರ್ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದರು. ಮಧುರ್ ಮೇಲಿನ ಅರೋಪಗಳು ಸುಳ್ಳು ಎಂದು 2012ರಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತ್ತು.
ಮಧುರ್ ಅವರು ನನ್ನನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ಮೋಸ ಮಾಡಿದ್ದಾರೆ ಎಂದು ಪ್ರೀತಿ ಆರೋಪಿಸಿದ್ದರು. ಆದರೆ, ಮಧುರ್ ಅವರಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದರು. ಕೋರ್ಟಿನಲ್ಲೂ ಮಧುರ್ ಅವರ ವಿರುದ್ಧದ ಕ್ರಿಮಿನಲ್ ತನಿಖೆ ರದ್ದಿಗೆ ಆದೇಶ ಸಿಕಿತ್ತು. ಕೋರ್ಟಿನಲ್ಲಿ ಸೋಲು ಕಂಡ ಪ್ರೀತಿ ನಂತರ ಭೂಗತ ಪಾತಕಿಗಳ ನೆರವು ಪಡೆಯುತ್ತಾರೆ.
ಅರುಣ್ ಗಾವ್ಳಿ ಅವರ ಬಂಟರಿಗೆ 75 ಸಾವಿರ ನೀಡಿ ಮಧುರ್ ಅವರನ್ನು ಹತ್ಯೆಗೈಯುವಂತೆ ಸುಪಾರಿ ನೀಡುತ್ತಾರೆ. ಮಧುರ್ ಅವರನ್ನು ಕೊಲ್ಲಲು ವಿಫಲರಾದ ಬಳಿಕ, ಮೊತ್ತವನ್ನು ಹಿಂತಿರುಗಿಸುವಂತೆ ಪ್ರೀತಿ ಕೇಳುತ್ತಾರೆ. ಆದರೆ,ಹತ್ಯೆಯ ಸಂಚಿನ ಬಗ್ಗೆ ಪೊಲೀಸರು ಸಂಪೂರ್ಣ ವರದಿಯನ್ನು ಕೋರ್ಟಿಗೆ ಸಲ್ಲಿಸಿದ್ದು, ಈಗ ಪ್ರೀತಿ ಜೈನ್ ಹಾಗೂ ಇನ್ನಿಬ್ಬರಿಗೆ ಜೈಲು ಶಿಕ್ಷೆ ಸಿಕ್ಕಿದೆ.












Click it and Unblock the Notifications