ಲೊನಾವಾಲದ ಶಿವಸೇನೆ ಮುಖಂಡ ಹತ್ಯೆ, ಓರ್ವ ಬಂಧನ
ಮುಂಬೈ, ಅ. 26: ಲೊನಾವಾಲದ ಶಿವಸೇನೆ ಮುಖಂಡರೊಬ್ಬರನ್ನು ಸೋಮವಾರ ಬೆಳಗ್ಗೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಮೃತರನ್ನು ಲೋನಾವಲಾದ ಶಿವಸೇನೆ ಘಟಕದ ಮಾಜಿ ಅಧ್ಯಕ್ಷ ರಾಹುಲ್ ಉಮೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಬಂಧಿಸಲಾಗಿದೆ, ವಿಚಾರಣೆ ಜಾರಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಲೋನಾವಲಾದ ಜಯಚಂದ್ ಚೌಕದ ಬಳಿ ಇರುವ ತಮ್ಮ ಕಚೇರಿಗೆ ಆಗಮಿಸಿದ್ದ ರಾಹುಲ್ ಶೆಟ್ಟಿ ಅವರ ಮೇಲೆ ಬೆಳಗ್ಗೆ ಸುಮಾರು 9.30ಕ್ಕೆ ಗುಂಡಿನ ದಾಳಿ ನಡೆಸಲಾಗಿದೆ. ತೀರಾ ಸಮೀಪದಿಂದ ಗುಂಡು ಹಾರಿಸಿದ್ದಾರೆ. ಅಲ್ಲದೆ, ಚೂಪಾದ ಆಯುಧವೊಂದರಿಂದ ತಿವಿಯಲಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಲಾಗಿದೆ. ಆದರೆ, ಮಾರ್ಗಮಧ್ಯೆಯಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ ಪಿ ಅಭಿನವ್ ದೇಶ್ ಮುಖ್ ಹೇಳಿದ್ದಾರೆ
ಮೇಲ್ನೋಟಕ್ಕೆ ಇದು ಹಳೆಯ ದ್ವೇಷದಿಂದ ನಡೆದಿರುವ ಕೃತ್ಯ ಎಂದು ತಿಳಿದು ಬಂದಿದೆ. ಶಿವಸೇನಾ ಮುಖಂಡರಾಗಿದ್ದ ರಾಹುಲ್ ಅವರ ತಂದೆ ಉಮೇಶ್ ಶೆಟ್ಟಿ ಅವರನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು.ರಾಹುಲ್ ಹತ್ಯೆ ಕುರಿತಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಚೇರಿ ಸಮೀಪದ ಸಿಸಿಟಿವಿ ದೃಶ್ಯಗಳನ್ನು ಪಡೆದು ಪರಿಶೀಲಿಸಲಾಗುತ್ತಿದೆ. ಘಟನೆ ಸಂಬಂಧ ಓರ್ವನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದರು.
ಭಾನುವಾರ ರಾತ್ರಿ ಇನ್ನೊಂದು ಪ್ರಕರಣದಲ್ಲಿ ಗಣೇಶ್ ನಾಯ್ಡು ಎಂಬುವರನ್ನು ಲೋನಾವಾಲದ ಹನುಮಾನ್ ತೆಕ್ಡಿ ಬಳಿ ಹತ್ಯೆ ಮಾಡಲಾಗಿದೆ. ಇಲ್ಲಿ ತನಕ ಎರಡು ಪ್ರಕರಣಗಳಿಗೂ ಲಿಂಕ್ ಪತ್ತೆಯಾಗಿಲ್ಲ. ಕಳೆದ ತಿಂಗಳು ಶಿವಸೇನಾ ಮುಖಂಡ ದೀಪಕ್ ಮರಾಟ್ಕರ್(32) ಹತ್ಯೆ ಮಾಡಲಾಗಿತ್ತು.