ಎನ್‌ಸಿಪಿ ನಾಯಕರ ಸೇರ್ಪಡೆಯಿಂದ ಶಿವಸೇನಾದಲ್ಲಿ ಬೆಂಕಿ: ಸಿಎಂ ಶಿಂಧೆಗೆ ಶಾಸಕರಿಂದ ಕಿರಿಕ್- ಉದ್ದವ್ ಕಡೆ ಮುಖ ಮಾಡಿದ ಮುಖಂಡರು
ಮುಂಬೈ, ಜುಲೈ 05: ಅಜಿತ್ ಪವಾರ್ ಸೇರಿದಂತೆ ಒಂಬತ್ತು ಎನ್‌ಸಿಪಿ ಶಾಸಕರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಭಾನುವಾರ ಸೇರ್ಪಡೆಗೊಂಡಿದ್ದಾರೆ. ಇದು ಶಿವಸೇನಾದಲ್ಲಿ ಬೆಂಕಿಯನ್ನು ಹೊತ್ತಿಸಿದೆ. ಶಿವಸೇನಾ ಸಚಿವರು ಸೇರಿದಂತೆ ಹಲವಾರು ಶಾಸಕರು ಸಾರ್ವಜನಿಕವಾಗಿ ಈ ಬೆಳವಣಿಗೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಮಹಾರಾಷ್ಟ್ರ ಸರ್ಕಾರದೊಳಗೆ ಸೇರಿಸಿಕೊಳ್ಳುವ ಅಗತ್ಯವೇನಿತ್ತು ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ಈ ಕುರಿತು ಮಾತನಾಡಿದ ಶಿವಸೇನಾ ಸಚಿವ ಶಂಭುಜರಾಜೇ ದೇಸಾಯಿ ಅವರು ಉದ್ದವ್ ಠಾಕ್ರೆ ( ಶಿವಸೇನೆ ಯುಬಿಟಿ ಅಧ್ಯಕ್ಷ ) ಯಾವುದೇ ಪ್ರಸ್ತಾವನೆಯನ್ನು ನಮ್ಮ ಮುಂದೆ ಇಟ್ಟರೆ, ಶಿಂಧೆ ನೇತೃತ್ವದ ಶಿವಸೇನಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೆ ಶಿವಸೇನಾವನ್ನು ಒಂದು ಮಾಡುವ ಕುರಿತು ಪರೋಕ್ಷವಾಗಿ ಮಾತನಾಡಿದ್ದಾರೆ.
'ಉದ್ಧವ್ ಅವರ ಕಡೆಯಿಂದ ಯಾರಾದರೂ ನಮ್ಮನ್ನು ತಲುಪಿದರೆ ನಾವು ಪ್ರತಿಯಾಗಿ ಮಾತುಕತೆ ನಡೆಸುತ್ತೇವೆ. ಯಾವುದೇ ಪ್ರಸ್ತಾವನೆ ಬಂದರೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ' ಎಂದು ದೇಸಾಯಿ ಹೇಳಿದ್ದಾರೆ.
ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರ ಕುರಿತು ಪಕ್ಷದ ಶಾಸಕರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಇದು ಶಿಂಧೆ ಅವರಿಗೆ ಕಿರಿಕಿರಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಶಾಸಕರ ಹಾಗೂ ನಾಯಕರ ಸಭೆಯನ್ನು ಬುಧವಾರ ಶಿಂಧೆ ಕರೆದಿದ್ದಾರೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬುಧವಾರ ಸಂಜೆ ತಮ್ಮ ಅಧಿಕೃತ ನಿವಾಸ ವರ್ಷಾ ಬಂಗಲೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಮತ್ತು ಶಾಸಕರ ಸಭೆಯನ್ನು ಕರೆದಿದ್ದಾರೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕರನ್ನು ಸರ್ಕಾರದೊಳಗೆ ಸೇರಿಸಿಕೊಳ್ಳುವ ವಿಚಾರದ ಬಗ್ಗೆ ಗಂಭೀರವಾಗಿ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.
ಏತನ್ಮಧ್ಯೆ, ಶಿವಸೇನಾದ ಕೋರ್ ಕಮಿಟಿ ಮಂಗಳವಾರ ಸಂಜೆ ಸಚಿವ ದೀಪಕ್ ಕೇಸರ್ಕರ್ ಅವರ ರಾಮ್‌ಟೆಕ್ ಬಂಗಲೆಯಲ್ಲಿ ಸಭೆ ಸೇರಿ ಸಮಸ್ಯೆಗಳ ಬಗ್ಗೆ ಚರ್ಚಿಸಿದೆ. ಸಭೆಯಲ್ಲಿ ಹಲವು ಶಾಸಕರು ಮತ್ತು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಮಂಗಳವಾರ, ಶಿವಸೇನಾ ಶಾಸಕ ಸಂಜಯ್ ಶಿರ್ಸಾತ್ ಅವರು, 'ಎಲ್ಲವನ್ನೂ ತ್ಯಾಗ ಮಾಡುವುದಾದರೆ, ಅಧಿಕಾರದಲ್ಲಿರುವುದರ ಅರ್ಥವೇನು?' ಎಂದು ಕೇಳಿದ್ದಾರೆ.

ಇದೇ ವೇಳೆ ಶಾಸಕ ಭರತ್ ಗೊಗವಾಲೆ ಮಾತನಾಡಿ, 'ಶಿಂಧೆ ನೇತೃತ್ವದ ಶಿವಸೇನೆಯಲ್ಲಿ ಅಸಮಾಧಾನವಿದೆ. ಆದರೆ ಅಸಮಾಧಾನ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕು' ಎಂದು ಹೇಳಿದ್ದಾರೆ.
'ಜನರು ಸ್ವಲ್ಪ ಮಟ್ಟಿಗೆ ಅಸಮಾಧಾನಗೊಂಡಿದ್ದಾರೆ. ಈಗ ನಾವು ನಮ್ಮ ಬ್ರೆಡ್ ಅನ್ನು ಹಂಚಿಕೊಳ್ಳಬೇಕಾಗುತ್ತದೆ. ಮೊದಲು ನಮಗೆ ಒಂದು ಪೂರ್ಣ ಬ್ರೆಡ್ ಸಿಗುತ್ತಿತ್ತು. ನಂತರ ನಾವು ಅರ್ಧಕ್ಕೆ ತೃಪ್ತಿ ಪಡಬೇಕಾಗಿ ಬಂದಿತು. ಈಗ ಕಾಲು ಭಾಗಕ್ಕೆ ತೃಪ್ತಿಪಡಬೇಕಾಗುತ್ತದೆ' ಎಂದು ಗೋಗಾವಾಲೆ ತಿಳಿಸಿದ್ದಾರೆ.
ಅಸಮಾಧಾನ ವ್ಯಕ್ತಪಡಿಸಿರು ಶಾಸಕ ಶಿರ್ಸತ್, 'ಎಲ್ಲವನ್ನು ಬಿಟ್ಟುಕೊಡಬೇಕಾಗಿ ಬಂದರೆ ಅಧಿಕಾರದಲ್ಲಿದ್ದು ಏನು ಪ್ರಯೋಜನ? ಎಲ್ಲವನ್ನೂ ತ್ಯಾಗ ಮಾಡಬೇಕಾದರೆ ನಾವೇಕೆ ಅಧಿಕಾರದಲ್ಲಿ ಇರಬೇಕು? ಈ ಹೊಂದಾಣಿಕೆಗಳು ಈಗ ನಡೆಯುತ್ತಿವೆ. ಇದಕ್ಕೆ ಸಿಎಂ ನ್ಯಾಯ ಒದಗಿಸಬೇಕು. ನ್ಯಾಯವಿಲ್ಲದಿದ್ದರೆ ಆಗ ಕೆಲಸಗಳು ನಡೆಯುವುದಿಲ್ಲ. ಎಲ್ಲರನ್ನೂ ಸಮಾಧಾನ ಪಡಿಸಬೇಕು' ಎಂದು ಶಿರ್ಸತ್ ಒತ್ತಾಯಿಸಿದ್ದಾರೆ.












Click it and Unblock the Notifications