ನನ್ನ ತಾತ ಕೊಟ್ಟ ಹೆಸರು ಶಿವಸೇನೆ, ಅದನ್ನು ಯಾರಿಗೋ ಕೊಡಲು ಚುನಾವಣಾ ಆಯೋಗಕ್ಕೆ ಹಕ್ಕಿಲ್ಲ: ಉದ್ಧವ್ ಠಾಕ್ರೆ
ಅಮರಾವತಿ, ಜುಲೈ. 10: ವಿದರ್ಭ ಪ್ರವಾಸದಲ್ಲಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಾವು ಮುಖ್ಯಮಂತ್ರಿಯಾಗಬೇಕು ಎಂದು ಯಾವತ್ತೂ ಬಯಸಿರಲಿಲ್ಲ. ಆದರೆ, ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ಅವರಿಗೆ ಭರವಸೆ ನೀಡಿದಂತೆ ಶಿವಸೇನೆ ನಾಯಕರ ಹುದ್ದೆಯನ್ನು ಬಯಸಿದ್ದರು ಎಂದು ಸೋಮವಾರ ಹೇಳಿದ್ದಾರೆ.
ನನ್ನ ತಾತ ಕೇಶವ್ ಠಾಕ್ರೆ ಅವರು ಶಿವಸೇನೆ ಹೆಸರನ್ನು ನೀಡಿದ್ದರಿಂದ ಚುನಾವಣಾ ಆಯೋಗಕ್ಕೆ ಯಾರಿಗೂ ಹೆಸರನ್ನು ನೀಡುವ ಹಕ್ಕು ಇಲ್ಲ. ಚುನಾವಣಾ ಸಂಸ್ಥೆಯ ಪಕ್ಷದ ಚುನಾವಣಾ ಚಿಹ್ನೆಯನ್ನು ನಿರ್ಧರಿಸಬಹುದು, ಆದರೆ ಹೆಸರಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜಕೀಯದಲ್ಲಿ ಬಿರುಗಾಳಿ ಬೀಸಿರುವ ಸಂದರ್ಭದಲ್ಲೇ ಉದ್ಧವ್ ಠಾಕ್ತೆ ಅವರು ಪ್ರವಾಸ ಕೈಗೊಂಡಿದ್ದಾರೆ.

ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ವಿಭಜನೆಗೊಂಡಿದೆ. ಅಜಿತ್ ಪವಾರ್ ಪಾಳಯ ಏಕನಾಥ್ ಶಿಂಧೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದರಿಂದ ಮಹಾರಾಷ್ಟ್ರದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಕಳೆದ ವರ್ಷ ಏಕನಾಥ್ ಶಿಂಧೆ ಅವರು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಶಿವಸೇನೆಯನ್ನು ಇಬ್ಭಾಗ ಮಾಡಿದ್ದರು. ಇದಾದ ಬಳಿಕ ಎನ್‌ಸಿಪಿ ಇಬ್ಭಾಗವಾಗಿದೆ.
ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಉದ್ಧವ್ ಠಾಕ್ರೆ, ಪಕ್ಷ ಒಡೆಯುವುದು ಹೊಸದಲ್ಲ ಆದರೆ ಈಗ ಕದಿಯಲಾಗುತ್ತಿದೆ ಎಂದು ಹೇಳಿದ್ದಾರೆ. ಶಿವಸೇನೆಯ ಹೆಸರಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವಿರುದ್ಧ ಉದ್ಧವ್ ವಾಗ್ದಾಳಿ ನಡೆಸಿದ್ದಾರೆ. ಶಿವಸೇನೆಯ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಯು ಏಕನಾಥ್ ಶಿಂಧೆಗೆ ಹೋಗಬೇಕೆಂಬ ಆಯೋಗದ ಆದೇಶದ ವಿರುದ್ಧ ಜುಲೈ 31 ರಂದು ಉದ್ಧವ್ ಬಣದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ.

ಏಕನಾಥ್ ಶಿಂಧೆ ಮತ್ತು ಅವರ ಶಾಸಕರನ್ನು ಅನರ್ಹಗೊಳಿಸಲಾಗುವುದು ಎಂಬ ಕಾರಣಕ್ಕೆ ಬಿಜೆಪಿ ಅಜಿತ್ ಪವಾರ್ ಗ್ಯಾಂಗ್ ಅನ್ನು ಸರ್ಕಾರಕ್ಕೆ ಸೇರಿಸಿದೆ ಎಂಬ ವದಂತಿಗಳು ಹರಡಿವೆ. 2019 ರಲ್ಲಿ ಬಿಜೆಪಿ ನೀಡಿದ ಭರವಸೆಯನ್ನು ಬಿಜೆಪಿ ಉಳಿಸಿಕೊಂಡಿದ್ದರೆ, ಅದು ಇತರ ಪಕ್ಷಗಳಿಗೆ ರತ್ನಗಂಬಳಿಯನ್ನು ಹಾಸಬೇಕಿರಲಿಲ್ಲ. ಈ ಹೊಸ ಬಿಕ್ಕಟ್ಟನ್ನು ಬಿಜೆಪಿ ಹೇಗೆ ನಿಭಾಯಿಸುತ್ತದೆ ಎಂಬುದನ್ನು ನೋಡಲು ನಾನು ಕಾಯುತ್ತಿದ್ದೇನೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಬಿಜೆಪಿ ಮತ್ತು ಶಿವಸೇನೆಗೆ ತಲಾ 2.5 ವರ್ಷಗಳ ಮುಖ್ಯಮಂತ್ರಿ ಸ್ಥಾನವನ್ನು ನೀಡುವುದಾಗಿ ಅಮಿತ್ ಶಾ ಭರವಸೆ ನೀಡಿದ್ದರು ಎಂದು ಉದ್ಧವ್ ಠಾಕ್ರೆ ಪುನರುಚ್ಚರಿಸಿದ್ದಾರೆ. ಶಿವಸೇನೆಯು 2.5 ವರ್ಷಗಳ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿತ್ತು. ಆದರೆ ಅಮಿತ್ ಶಾ ಆ ಭರವಸೆ ನೀಡಲಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಆರೋಪಿಸಿದ್ದಾರೆ.












Click it and Unblock the Notifications