ಸಿಎಂ ಸ್ಥಾನಕ್ಕೆ ಟವೆಲ್ ಹಾಕಿದ ಅಜಿತ್ ಪವಾರ್: ಉದ್ದವ್ ಜೊತೆ ಹೋಗುತ್ತೇವೆಂದ ಶಿಂಧೆ ಶಾಸಕರು- 'ಮಹಾ' ಸಂಕಟದಲ್ಲಿ ಬಿಜೆಪಿ
ಮುಂಬೈ, ಜುಲೈ 05: ಜನರ ಕಲ್ಯಾಣಕ್ಕಾಗಿ ನನ್ನ ಆಲೋಚನೆಯಲ್ಲಿರುವ ಕೆಲವು ಯೋಜನೆಗಳನ್ನು ಜಾರಿಗೆ ತರಲು ನಾನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಲು ಬಯಸುತ್ತೇನೆ ಎಂದು ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿಕೆ ನೀಡಿದ್ದಾರೆ. ಆ ಮೂಲಕ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲು ನಾನು ಸಿದ್ದನಿದ್ದೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಕಳೆದ ಭಾನುವಾರ ಎನ್‌ಸಿಪಿಯ ಶಾಸಕರ ಜೊತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಗೊಂಡ ಬಳಿಕೆ ಈ ಹೇಳಿಕೆ ನೀಡಿದ್ದಾರೆ. ಇದು ಮಹಾರಾಷ್ಟ್ರ ಸರ್ಕಾರದಲ್ಲಿ ಕಂಪನವನ್ನು ಸೃಷ್ಟಿಸುವ ಸಾಧ್ಯತೆ ಇದೆ.

ಇದೇ ವೇಳೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಹಾಡಿ ಹೊಗಳಿದ, 'ಶರದ್ ಪವಾರ್ ನಮ್ಮ ದೇವರು, ನಾವು ಅವರ ಆಶೀರ್ವಾದವನ್ನು ಬಯಸುತ್ತೇವೆ' ಎಂದು ಹೇಳಿದ್ದಾರೆ.
2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ನರೇಂದ್ರ ಮೋದಿಯವರ ವರ್ಚಸ್ಸಿನಿಂದ ಎಂದಿರುವ ಅಜಿತ್ ಪವಾರ್, 'ಬಿಜೆಪಿಯಲ್ಲಿ ನಾಯಕರು 75 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತಾರೆ. ಆದರೆ, ಶರದ್ ಪವಾರ್ ಅವರಿಗೆ 83 ವರ್ಷ ವಯಸ್ಸಾಗಿದೆ' ಎಂದು ತಿಳಿಸಿದ್ದಾರೆ.
2017ರಲ್ಲೂ ವರ್ಷಾ ಬಂಗಲೆಯಲ್ಲಿ ಸಭೆ ನಡೆಸಿದ್ದೆವು. ಪಕ್ಷದ ಹಿರಿಯ ನಾಯಕರಾದ ಛಗನ್ ಭುಜಬಲ್, ಜಯಂತ್ ಪಟೇಲ್ ಅವರ ಆದೇಶದ ಮೇರೆಗೆ ನಾನು ಮತ್ತು ಹಲವರು ಅಲ್ಲಿಗೆ ಹೋಗಿದ್ದೆವು. ಬಿಜೆಪಿಯ ಹಲವು ಮುಖಂಡರು ಕೂಡ ಇದ್ದರು. ಸಚಿವ ಸ್ಥಾನಗಳ ಹಂಚಿಕೆ ಬಗ್ಗೆ ನಮ್ಮ ನಡುವೆ ಚರ್ಚೆಗಳು ನಡೆದವು. ಆ ನಂತರ ನಮ್ಮ ಪಕ್ಷವು ಒಂದು ಹೆಜ್ಜೆ ಹಿಂದಕ್ಕೆ ಸರಿಯಿತು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

'2024ರಲ್ಲಿ ಮೋದಿ ಅವರೇ ಬರುತ್ತಾರೆ. ಇಂದು ನಾವು ಎನ್‌ಸಿಪಿಯನ್ನು ಮುನ್ನಡೆಸಬೇಕಾಗಿದೆ. ನಾವು ಚಿಹ್ನೆ ಮತ್ತು ಹೆಸರನ್ನು ನಮ್ಮೊಂದಿಗೆ ಇಟ್ಟುಕೊಳ್ಳಬೇಕು. ನಾವೀಗ ರಾಜ್ಯ ಪಕ್ಷವಾಗಿದ್ದೇವೆ. ನಮ್ಮ ರಾಷ್ಟ್ರೀಯ ಪಕ್ಷದ ಹೆಸರು ಕಳೆದುಹೋಗಿದೆ. ನಾವು ಅದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ನಾವು ಮುಂಬೈ ಮತ್ತು ದೆಹಲಿಯಲ್ಲಿ ಅಧಿಕಾರದಲ್ಲಿರಲು ಬಯಸುತ್ತೇವೆ' ಎಂದು ತಿಳಿಸಿದ್ದಾರೆ.
ಈಗ ಹೊಸ ಪೀಳಿಗೆ ಮುಂದೆ ಬರುತ್ತಿದೆ. ನೀವು (ಶರದ್ ಪವಾರ್) ನಿಮ್ಮ ಆಶೀರ್ವಾದವನ್ನು ನೀಡಿ. ನಾವು ತಪ್ಪು ಮಾಡಿದರೆ ನನಗೆ ಕರೆ ಮಾಡಿ. ಇದು ತಪ್ಪು ಎಂದು ಹೇಳಿ. ನಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತೇವೆ. ಅದನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

ಪಕ್ಷದ ಸಭೆಯಲ್ಲಿ ಮಾತನಾಡಿರುವ ಎನ್‌ಸಿಪಿ (ಅಜಿತ್ ಪವಾರ್ ಬಣ) ನಾಯಕ ಛಗನ್ ಭುಜಬಲ್, '40 ಕ್ಕೂ ಹೆಚ್ಚು ಶಾಸಕರು ನಮ್ಮೊಂದಿಗಿದ್ದಾರೆ. ಕೆಲವರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವರು ಬೇರೆ ರಾಜ್ಯಗಳಲ್ಲಿದ್ದಾರೆ. ಆದರೆ ಅವರು ಅಫಿಡವಿಟ್‌ಗೆ ಸಹಿ ಹಾಕಿದ್ದಾರೆ' ಎಂದು ಹೇಳಿದ್ದಾರೆ.












Click it and Unblock the Notifications