'25 ವರ್ಷಗಳಿಂದ ಹಾವಿಗೆ ಆಹಾರ, ಅದೀಗ ನಮ್ಮ ಮೇಲೆ ಮುನಿಸಿಕೊಂಡಿದೆ'
ಮುಂಬೈ, ಮಾರ್ಚ್ 03: ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಮುಸುಕಿನ ದಾಳಿ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ನಾವು 25 ವರ್ಷಗಳ ಕಾಲ ಹಾವಿಗೆ ಆಹಾರ ನೀಡಿದ್ದೇವೆ. ಈಗ ಅದೇ ಹಾವು ನಮ್ಮ ಮೇಲೆ ವಿಷ ಕಾರುತ್ತಿದೆ. ಆದರೆ ಈ ಹಾವನ್ನು ಹೇಗೆ ತುಳಿಯಬೇಕೆಂದು ನಮಗೆ ತಿಳಿದಿದೆ ಎಂದಿದ್ದಾರೆ. ನಮ್ಮ ಮೇಲೆ ಆರೋಪ ಹೊರಿಸುವವರು ಯಾರೇ ಆಗಲಿ ಅಂಥವರ ತಲೆ ತೆಗೆಯೋಕೆ ನಾವು ಸಿದ್ಧರಿದ್ದೇವೆ ಎಂದು ಉದ್ಧವ್ ಠಾಕ್ರೆ ಹರಿಹಾಯ್ದಿದ್ದಾರೆ.
ರಾಜ್ಯ ಬಜೆಟ್ ಅಧಿವೇಶನದ ಮುನ್ನಾದಿನದಂದು ಮುಂಬೈನಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಶಾಸಕರು ಮತ್ತು ಮುಖಂಡರ ಜಂಟಿ ಸಭೆಯಲ್ಲಿ ಉದ್ಧವ್ ಠಾಕ್ರೆ ಅವರು ಮಾತನಾಡಿ, ಬಿಜೆಪಿಯ ಬಗ್ಗೆ ಕಟುವಾದ ಕಾಮೆಂಟ್‌ಗಳನ್ನು ಮಾಡಿದರು. ಈ ಸಭೆಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಕೂಡ ಉಪಸ್ಥಿತರಿದ್ದರು.
ಸಭೆಗೂ ಮುನ್ನ ಉದ್ಧವ್ ಠಾಕ್ರೆ ಅವರು ಬಜೆಟ್ ಅಧಿವೇಶನದಲ್ಲಿ ಶೇ 100ರಷ್ಟು ಹಾಜರಾತಿಯನ್ನು ಖಚಿತಪಡಿಸಿಕೊಳ್ಳುವಂತೆ ಶಾಸಕರಿಗೆ ಸೂಚನೆ ನೀಡಿದ್ದರು. ಉದ್ಧವ್ ಠಾಕ್ರೆ ತಮ್ಮ ಬೆನ್ನುಹುರಿಯ ಶಸ್ತ್ರಚಿಕಿತ್ಸೆಯ ನಂತರ ಆರೋಗ್ಯ ಸಮಸ್ಯೆಗಳ ಕಾರಣ ಕಳೆದ ಅಧಿವೇಶನಕ್ಕೆ ಗೈರಾಗಿದ್ದರು.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಕೇಂದ್ರವನ್ನು ಗುರಿಯಾಗಿಸಿಕೊಂಡು ಸೇಡು ತೀರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಬಂಧನವನ್ನು ಉಲ್ಲೇಖಿಸಿ ಶರದ್ ಪವಾರ್, "ನನ್ನ ರಾಜಕೀಯ ಜೀವನದಲ್ಲಿ ಇಂತಹ ಪ್ರತೀಕಾರದ ಕೇಂದ್ರ ಸರ್ಕಾರವನ್ನು ನಾನು ಎಂದಿಗೂ ನೋಡಿಲ್ಲ" ಎಂದು ಹೇಳಿದರು.

ನವಾಬ್ ಮಲಿಕ್ ಬಂಧನದ ನಂತರ ಮಮತಾ ಬ್ಯಾನರ್ಜಿ ತಮಗೆ ಕರೆ ಮಾಡಿದ್ದರು ಎಂದು ಶರದ್ ಪವಾರ್ ಹೇಳಿದ್ದಾರೆ. "ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷದ ನಾಲ್ವರು ಸಹೋದ್ಯೋಗಿಗಳನ್ನು ಸಹ [ಕೇಂದ್ರದಿಂದ] ಜೈಲಿಗೆ ಹಾಕಿದ್ದಾರೆ ಎಂದು ಹೇಳಿದರು. ಹೋರಾಟದಲ್ಲಿ ನಾವು ಒಗ್ಗೂಡಬೇಕು ಎಂದು ಅವರು ಹೇಳಿದರು" ಎಂದು ಪಾವರ್ ಹೇಳಿದ್ದಾರೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ನವಾಬ್ ಮಲಿಕ್ ಅವರನ್ನು ವಿಚಾರಣೆ ನಡೆಸಿದ ಬಳಿಕ ಇಡಿ ಫೆಬ್ರವರಿ 23 ರಂದು ಬಂಧಿಸಿದೆ. ಈ ಬಂಧನ ಮಹಾರಾಷ್ಟ್ರದ ರಾಜಕೀಯದಲ್ಲಿ ಕೋಲಹಲವನ್ನು ಸೃಷ್ಟಿಸಿದೆ. ನವಾಬ್ ಮಲಿಕ್ ಬಂಧನದ ನಂತರ ಎಲ್ಲಾ ಕಡೆಯಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಡಿ ಕ್ರಮಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಇದೀಗ ಈ ವಿಚಾರದಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಮಮತಾ ಬ್ಯಾನರ್ಜಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಕರೆ ಮಾಡಿದ್ದರು.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಶರದ್ ಪವಾರ್ ಅವರಿಗೆ ಕರೆ ಮಾಡಿ ನವಾಬ್ ಮಲಿಕ್ ಬಂಧನವನ್ನು ಖಂಡಿಸಿದ್ದರು. ಇದರಿಂದ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸುವ ಮಾತನ್ನು ಅವರು ಆಡಿದ್ದಾರೆ. ಪಕ್ಷ ವಿರೋಧಿಗಳ ವಿರುದ್ಧ ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಮಮತಾ ಶರದ್ ಪವಾರ್ ಅವರಿಗೆ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಸಿಲುಕಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದು ದೇಶದ ಒಕ್ಕೂಟ ರಚನೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇನ್ನೂ ಮಹಾರಾಷ್ಟ್ರ ಸಚಿವ ಅಶೋಕ್ ಚವಾಣ್ ಕೂಡ ಇದೇ ಆರೋಪವನ್ನು ಮಾಡಿದ್ದಾರೆ. ರಾಜಕೀಯ ತುಂಬಾ ಕೀಳು ಮಟ್ಟಕ್ಕೆ ಹೋಗಿದೆ. ಇದು ಅತ್ಯಂತ ನಿರಾಶಾದಾಯಕ ಸಂಗತಿ ಇದರ ವಿರುದ್ಧ ನಾವು ಹೋರಾಡುತ್ತೇವೆ ಎಂದಿದ್ದಾರೆ.












Click it and Unblock the Notifications