2 ಗಂಟೆ ಸಮಯ ಉಳಿಸಲಿದೆ ಮುಂಬೈ-ದೆಹಲಿ ಹೊಸ ಎಕ್ಸ್ ಪ್ರೆಸ್ ರೈಲು
ಭಾರತೀಯ ರೈಲ್ವೆಯು ಮುಂಬೈ-ದೆಹಲಿ ಮಧ್ಯೆ ವೇಗದ ರಾಜಧಾನಿ ಎಕ್ಸ್ ಪ್ರೆಸ್ ಪರಿಚಯಿಸಲು ಯೋಜನೆ ರೂಪಿಸಿದೆ. ಈ ಮಾರ್ಗದಲ್ಲಿ ಮೂರನೇ ರಾಜಧಾನಿ ಎಕ್ಸ್ ಪ್ರೆಸ್ ಸಂಚರಿಸಲಿದ್ದು, ಇದರಿಂದ ಈ ಮಾರ್ಗದಲ್ಲಿನ ಸಂಚಾರ ಸಮಯ ಎರಡು ಗಂಟೆ ಕಡಿಮೆ ಆಗಲಿದೆ.
ಈ ಹೊಸ ರೈಲು ಈ ವರ್ಷದ ದೀಪಾವಳಿ ವೇಳೆಗೆ ಆರಂಭಿಸುವ ಸಾಧ್ಯತೆ ಇದೆ. ಬಾಂದ್ರಾ (ಮುಂಬೈ) ಹಾಗೂ ನಿಜಾಮುದ್ದೀನ್ ನಿಲ್ದಾಣ (ದೆಹಲಿ) ಮಧ್ಯದ ದೂರವನ್ನು ಹದಿಮೂರು ಗಂಟೆಯಲ್ಲಿ ಕ್ರಮಿಸಲಿದೆ ಎಂದು ಅಧಿಕಾರಿಗಳು ತಿಳಿಸಲಿದ್ದಾರೆ.
ಸದ್ಯಕ್ಕೆ ಈ ಮಾರ್ಗದಲ್ಲಿ ಆಗಸ್ಟ್ ಕ್ರಾಂತಿ ರಾಜಧಾನಿ ಹಾಗೂ ಮುಂಬೈ ಸೆಂಟ್ರಲ್- ನವದೆಹಲಿ ರಾಜಧಾನಿ ರೈಲುಗಳು ಸಂಚರಿಸುತ್ತಿವೆ. ಈ ಎರಡೂ ರೈಲುಗಳು 15 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ. ಆಗಸ್ಟ್ ಕ್ರಾಂತಿ ರೈಲು 1,377 ಕಿಲೋಮೀಟರ್ ದೂರವನ್ನು 17 ಗಂಟೆ 05 ನಿಮಿಷದಲ್ಲಿ ತಲುಪುತ್ತಿದೆ. ಅದರ ಸರಾಸರಿ ವೇಗ ಪ್ರತಿ ಗಂಟೆಗೆ 80 ಕಿಲೋಮೀಟರ್.

ಇನ್ನು ಮುಂಬೈ ಸೆಂಟ್ರಲ್- ನವದೆಹಲಿ ರಾಜಧಾನಿ ರೈಲು 15 ಗಂಟೆ 35 ನಿಮಿಷದಲ್ಲಿ, ಪ್ರತಿ ಗಂಟೆಗೆ 89 ಕಿಲೋಮೀಟರ್ ವೇಗದಲ್ಲಿ 1386 ಕಿ.ಮೀ ದೂರವನ್ನು ಕ್ರಮಿಸುತ್ತಿದೆ. ಎರಡೂ ರೈಲು ಬಾಂದ್ರಾದಲ್ಲಿ ನಿಲುಗಡೆ ನೀಡುವುದಿಲ್ಲ.
ಪರೀಕ್ಷಾರ್ಥ (ಹೊಸ ರೈಲು) ಸಂಚಾರವು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಸದ್ಯಕ್ಕೆ ಮುಂಬೈ ರಾಜಧಾನಿ ರೈಲಿನಲ್ಲಿ ಇಪ್ಪತ್ನಾಲ್ಕು ಬೋಗಿ ಹಾಗೂ ಎರಡು ಎಂಜಿನ್ ಬಳಸಲಾಗುತ್ತಿದೆ. ಪ್ರಯಾಣದ ಸಮಯವನ್ನು ಎರಡು ಗಂಟೆ ಕಡಿಮೆ ಮಾಡುವುದಕ್ಕೆ ಸಾಧ್ಯವೇ ಎಂದು ಪ್ರಯತ್ನಿಸುತ್ತಿದ್ದೇವೆ. ನಾವೀಗ ಎಲ್ ಎಚ್ ಬಿ ಬೋಗಿಗಳನ್ನು ಬಳಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೆ ಪರ್ಯಾಯವಾಗಿ, ಹೊಸ ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಹದಿನಾಲ್ಕು ಬೋಗಿ ಹಾಗೂ ಒಂದು ಎಂಜಿನ್ ಬಳಸಲಾಗುತ್ತದೆ. ಇದರಿಂದ ವೇಗ ಹೆಚ್ಚಾಗುತ್ತದೆ. ಆ ನಂತರ ಈ ಎರಡು ಆಯ್ಕೆಯಲ್ಲಿ ಯಾವುದು ಉತ್ತಮ ಎಂದು ನಿರ್ಧರಿಸಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಎಲ್ ಎಚ್ ಬಿ ಬೋಗಿಗಳು ಉತ್ತಮ ರಚನೆಯನ್ನು ಹೊಂದಿವೆ. ಹಳಿ ತಪ್ಪುವುದು ಅಥವಾ ಇತರ ಅಪಘಾತಗಳ ಸಾಧ್ಯತೆ ಕಡಿಮೆಯಿರುತ್ತದೆ. ಈ ಬೋಗಿಗಳಲ್ಲಿ ಅತ್ಯುತ್ತಮ ಬ್ರೇಕಿಂಗ್ ವ್ಯವಸ್ಥೆ ಕೂಡ ಇರುತ್ತದೆ.
ಈ ವರೆಗೆ ಮುಂಬೈ ರಾಜಧಾನಿ ಎಕ್ಸ್ ಪ್ರೆಸ್ ನ ಅನುಮತಿ ಸಿಕ್ಕಿರುವ ವೇಗ ಪ್ರತಿ ಗಂಟೆಗೆ 130 ಕಿಲೋಮೀಟರ್. ಆದರೆ ಬಹಳ ತಿರುವುಗಳಿರುವುದರಿಂದ ಮತ್ತು ವೇಗದ ಮಿತಿ ಕಾರಣಕ್ಕೆ ಇದರ ಸರಾಸರಿ ವೇಗ ಪ್ರತಿ ಗಂಟೆಗೆ 89 ಕಿಲೋಮೀಟರ್ ಗೆ ಇಳಿದಿದೆ. ರೈಲ್ವೆಯಿಂದ ಈ ವೇಗವನ್ನು 90ರಿಂದ 95 ಕಿಲೋಮೀಟರ್ ಗೆ ಹೆಚ್ಚಿಸುವ ಗುರಿ ಇದೆ ಎಂದು ಮೂಲಗಳು ತಿಳಿಸಿವೆ.
ಎಲ್ ಎಚ್ ಬಿ ಬೋಗಿಗಳನ್ನು ಹೇಗೆ ರೂಪಿಸಲಾಗಿರುತ್ತದೆ ಅಂದರೆ, ಗರಿಷ್ಠ ವೇಗ ಪ್ರತಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಸಾಗಬಹುದು. ಇನ್ನು 13 ಗಂಟೆಯಲ್ಲೇ ಈ ಮಾರ್ಗವನ್ನು ಕ್ರಮಿಸಬೇಕು ಅಂತಾದರೆ, ಮುಂಬೈ ರಾಜಧಾನಿ ರೈಲಿಗೆ ಸದ್ಯಕ್ಕೆ ಇರುವ ಆರು ಕಡೆಯ ನಿಲುಗಡೆಯನ್ನು ಎರಡು ಅಥವಾ ಮೂರಕ್ಕೆ ಇಳಿಸಬೇಕಾಗುತ್ತದೆ.
ಈಗ ಪರಿಚಯಿಸಲಿರುವ ಹೊಸ ರೈಲಿನ ಸರಾಸರಿ ವೇಗ ಹೆಚ್ಚಿಸಲಿಕ್ಕೆ ಇಲಾಖೆ ಪ್ರಯತ್ನಿಸುತ್ತಿದೆ. ಹೊಸ ರಾಜಧಾನಿ ಎಕ್ಸ್ ಪ್ರೆಸ್ ನ ವೇಗ ಗಂಟೆಗೆ 130 ಕಿ.ಮೀ ಗರಿಷ್ಠವಾಗಿರುತ್ತದೆ. ದೆಹಲಿ-ಮುಂಬೈ ರೈಲು ಮಾರ್ಗಕ್ಕೆ ಬಹಳ ಮಹತ್ವ ಇದೆ. ವ್ಯಾಪಾರಿಗಳೇ ಈ ಮಾರ್ಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಆ ವರ್ಗ ಈಗ ವಿಮಾನಗಳಲ್ಲಿ ಪ್ರಯಾಣಿಸುತ್ತಿದೆ.












Click it and Unblock the Notifications