ನಿದ್ದೆಯಿಂದ ಏಳುವ ಹೊತ್ತಿಗೆ ಮಹಾರಾಷ್ಟ್ರಕ್ಕೆ ಫಡ್ನವಿಸ್ ಸಿಎಂ, ಅಜಿತ್ ಪವಾರ್ ಡಿಸಿಎಂ!
Recommended Video
ಮುಂಬೈ, ನವೆಂಬರ್ 23: ಮಹಾರಾಷ್ಟ್ರದಲ್ಲಿ ತಡರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕಳೆದ ಹಲವು ದಿನಗಳಿಂದ ದೇಶದ ವಾಣಿಜ್ಯ ನಗರಿ ಮುಂಬೈ ಕೇಂದ್ರಿತವಾಗಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳು ಈ ಮೂಲಕ ಹೊಸ ಮಜಲು ಪಡೆದುಕೊಂಡಿವೆ. ಎನ್‌ಸಿಪಿ- ಶಿವಸೇನಾ- ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೇರುವ ಕುರಿತು ಅಂತಿಮ ಹಂತದ ಮಾತುಕತೆ ಶುಕ್ರವಾರದ ಕೊನೆಯವರೆಗೂ ನಡೆದಿದ್ದವು. ಆದರೆ, ಶನಿವಾರದ ಬೆಳಕು ಹರಿಯುವ ಹೊತ್ತಿಗೆ ಮಹಾರಾಷ್ಟ್ರ ಹೊಸ ಮುಖ್ಯಮಂತ್ರಿಯನ್ನು ಕಂಡಿದೆ.
ಕೇವಲ ಸುದ್ದಿ ಸಂಸ್ಥೆ ಎಎನ್‌ಐ ಕ್ಯಾಮೆರಾ ಮಾತ್ರವೇ ಇದ್ದ ರಾಜಭವನದಲ್ಲಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ್ದು ನಾಟಕೀಯ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.

ದೇವೇಂದ್ರ ಪಡ್ನವೀಸ್ ಪಾಲಿಗೆ ಇದು ಎರಡನೇ ಬಾರಿ ಸಿಎಂ ಆಗಿ ಅಧಿಕಾರ ನಡೆಸಲು ಸಿಕ್ಕಿರುವ ಅವಕಾಶ.
288 ಒಟ್ಟಾರೆ ಬಲ: 105 ಬಿಜೆಪಿ, 56 ಶಿವಸೇನೆ, 54 ಎನ್‌ಸಿಪಿ, 44 ಕಾಂಗ್ರೆಸ್,29 ಇತರರು.
ಇತ್ತ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಫಡ್ನವಿಸ್ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪ್ರಧಾನಿ ಮೋದಿ ಶುಭಾಶಯ ಕೋರಿ ಟ್ವೀಟ್ ಮಾಡಿದರು.
ಮುಂಜಾನೆ ನಡೆದ ಬೆಳವಣಿಗೆ:
ಅಚ್ಚರಿಯ ಸಂಗತಿ ಎಂದರೆ ಶನಿವಾರ ಬೆಳಗ್ಗೆ 5.47 ನಿಮಿಷಕ್ಕೆ ಮಹಾರಾಷ್ಟ್ರದ ರಾಜಭವನದಿಂದ ರಾಜ್ಯಪಾಲರ ಆಳ್ವಿಕೆ ಹಿಂತೆದುಕೊಳ್ಳುವ ಕುರಿತು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಯಿತು. ಅಲ್ಲಿಂದ ರಾಷ್ಟ್ರಪತಿ ಭವನಕ್ಕೆ ತಲುಪಿದ ವರದಿಗೆ ಅಂಕಿತವೂ ಸಿಕ್ಕಿ ಹೋಯಿತು. ಇದೇ ವೇಳೆಗೆ ಫಡ್ನವೀಸ್ ಅಧಿಕಾರ ಸ್ವೀಕಾರಕ್ಕೆ ಸರಳ ಸಮಾರಂಭವೂ ಆಯೋಜನೆಗೊಂಡಿತ್ತು. ಹೀಗೆ, ಮಹಾರಾಷ್ಟ್ರ ಹಾಗೂ ದೇಶದ ಜನ ನಿದ್ದೆಯಿಂದ ಏಳುವ ಹೊತ್ತಿಗೆ ಅಕ್ಟೋಬರ್ 24ರಿಂದ ಅನಿಶ್ಚಿತತೆಯಲ್ಲಿದ್ದ ಮಹಾರಾಷ್ಟ್ರ ರಾಜಕೀಯ ಹೊಸ ಆಯಾಮವನ್ನು ಪಡೆದುಕೊಂಡಿತ್ತು.












Click it and Unblock the Notifications