ಹೃದಯಾಘಾತದಿಂದ ಖ್ಯಾತ ಹಿಂದಿ ಗಾಯಕ ಮೊಹಮ್ಮದ್ ಅಜೀಜ್ ನಿಧನ
ಮುಂಬೈ, ನವೆಂಬರ್ 27 : 'ಮರ್ದ್' ಸೇರಿದಂತೆ ಹಿಂದಿ ಚಿತ್ರನಟ ಅಮಿತಾಭ್ ಬಚ್ಚನ್ ಅವರ ಹಲವಾರು ಚಿತ್ರಗಳಲ್ಲಿ ಹಾಡಿನ ಮೂಲಕ ತಮ್ಮ ಕಂಠಸಿರಿಯ ಪರಿಚಯ ಮಾಡಿಸಿದ್ದ ಖ್ಯಾತ ಗಾಯಕ ಮೊಹಮ್ಮದ್ ಅಜೀಜ್ ಅವರು ಮಂಗಳವಾರ ನಿಧನರಾಗಿದ್ದಾರೆ.
ಅಮರ ಗಾಯಕ ಮೊಹಮ್ಮದ್ ರಫಿ ಅವರ ಧ್ವನಿಯ ಪ್ರತಿಧ್ವನಿಯಂತಿದ್ದ ಮೊಹಮ್ಮದ್ ಅಜೀಜ್ ಅವರು, ಅಮಿತಾಭ್ ಬಚ್ಚನ್ ಅವರಿಗೆ ಇವರೇ ಹಾಡಬೇಕು ಎನ್ನುವಷ್ಟು ಜನಪ್ರಿಯತೆ ಗಳಿಸಿದ್ದರು. ಕನ್ನಡದ ರಾಜ್ ಕುಮಾರ್ ಮತ್ತು ಪಿಬಿ ಶ್ರೀನಿವಾಸ್ ಅವರ ಜೋಡಿಯಂತೆ ಈ ಜೋಡಿಯೂ ಜನಪ್ರಿಯತೆ ಗಳಿಸಿತ್ತು.
ಕೋಲ್ಕತಾದ ಘಾಲಿಬ್ ಹೋಟೆಲಿನಲ್ಲಿ ಹಾಡುತ್ತಿದ್ದ ಅಜೀಜ್ ಅವರಿಗೆ ಮೊದಲ ಅವಕಾಶ ನೀಡಿದ್ದು, ಸದ್ಯಕ್ಕೆ #ಮಿಟೂ ಆರೋಪ ಹೊತ್ತಿರುವ ಸಂಗೀತ ನಿರ್ದೇಶಕ ಅನು ಮಲಿಕ್ ಅವರು. ಮರ್ದ್ ಚಿತ್ರದಲ್ಲಿ 'ಯೇ ಮರ್ದ್ ಟಾಂಗೆವಾಲಾ, ಮೈ ಹೂ ಮರ್ದ್ ಟಾಂಗೆವಾಲಾ' ಎಂದು ಹಾಡುತ್ತ ಬಂದವರು ನಂತರ ಹಿಂದಿರುಗಿ ನೋಡಿದ್ದೇ ಇಲ್ಲ.
64 ವರ್ಷದ ಮೊಹಮ್ಮದ್ ಅಜೀಜ್ ಅವರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಮುಂಬೈಗೆ ಆಗಮಿಸಿದ್ದರು. ಮುಂಬೈ ಏರ್ಪೋರ್ಟ್ ಗೆ ಆಗಮಿಸುತ್ತಿದ್ದಂತೆ ಅವರ ಆರೋಗ್ಯ ಏರುಪೇರಾಯಿತು. ಕ್ಯಾಬ್ ನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಯಾಕೋ ಆರೋಗ್ಯ ಸರಿಯಾಗಿಲ್ಲ ಎಂದು ಡ್ರೈವರ್ ಗೆ ಹೇಳಿದ್ದಾರೆ.

ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಸ್ಪತ್ರೆ ತಲುಪುದರೊಳಗಾಗಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. 1954ರಲ್ಲಿ ಕೋಲ್ಕತಾದಲ್ಲಿ ಜನಿಸಿದ್ದ ಅವರ ಅಂತಿಮ ಸಂಸ್ಕಾರವನ್ನು ಮುಂಬೈನಲ್ಲಿಯೇ ಬುಧವಾರ ನೆರವೇರಿಸಲಾಗುತ್ತಿದೆ.












Click it and Unblock the Notifications