ಮ್ಯಾಗಿ ಪರ ಪ್ರಚಾರ, ಮಾಧುರಿಗೆ ಬಂತು ಗ್ರಹಚಾರ!
ಮುಂಬೈ, ಮೇ.29: ನಿಷೇಧದ ಭೀತಿಯಲ್ಲಿರುವ '2 ಮಿನಿಟ್ ಫುಡ್' ಮ್ಯಾಗಿ ಪರ ಪ್ರಚಾರ ಮಾಡಿದ ತಪ್ಪಿಗೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಗೆ ಗ್ರಹಚಾರ ವಕ್ಕರಿಸಿದೆ. ಉತ್ತರ ಪ್ರದೇಶದ ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಪ್ರಾಧಿಕಾರ ದಿಂದ ನಟಿ ಮಾಧುರಿಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.
ಉತ್ತರ ಪ್ರದೇಶದ ಫುಡ್ ಆಫೀಸರ್ ಗಳು ಮ್ಯಾಗಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೀಸ ಹಾಗೂ ಮೊನಿಸೋಡಿಯಂ ಗ್ಲುಟಮೇಟ್ (ಎಂಎಸ್ ಜಿ) ಇರುವುದರಿಂದ ಮ್ಯಾಗಿ ಮಾರಾಟ ನಿಷೇಧಕ್ಕೆ ಮುಂದಾಗಿದೆ.

ನೆಸ್ಲೆ ಸಂಸ್ಥೆಯ ಮ್ಯಾಗಿ ಪರ ಪ್ರಚಾರ ಮಾಡಿರುವ ಮಾಧುರಿ ದೀಕ್ಷಿತ್ ಅವರಿಗೆ ಈ ಬಗ್ಗೆ ವಿವರಣೆ ನೀಡುವಂತೆ ಕೋರಿ ಹರಿದ್ವಾರ್ ಆಹಾರ ಮತ್ತು ಔಷಧ ಪ್ರಾಧಿಕಾರದಿಂದ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ಗೆ ಉತ್ತರಿಸಲು 15 ದಿನಗಳ ಕಾಲ ಕಾಲಾವಕಾಶ ನೀಡಲಾಗಿದೆ.
ಮ್ಯಾಗಿಯಲ್ಲಿ ಬಳಸಲಾದ ರಾಸಾಯನಿಕಗಳ ಬಗ್ಗೆ ನಿಮಗೆ ಅರಿವಿದೆಯೇ? ಮ್ಯಾಗಿ ಪೋಷಕಾಂಶಗಳಿಂದ ಭರಿತವಾಗಿದೆ ಎಂದು ಪ್ರಚಾರ ಏಕೆ ನಡೆಸಿದ್ದೀರಿ? ಈ ರೀತಿ ಕೆಲ ಪ್ರಶ್ನೆಗಳನ್ನು ಕೇಳಲಾಗಿದೆ. ಇದಕ್ಕೆ ಮಾಧುರಿ ಸರಿಯಾದ ಉತ್ತರ ನೀಡದಿದ್ದರೆ ಆಕೆ ಮೇಲೂ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.
ಮ್ಯಾಗಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಂಡಿಜಿ ಹಾಗೂ ಸೀಸ ಇರುವುದು ಪತ್ತೆಯಾಗಿದ್ದರಿಂದ ಉತ್ತರ ಪ್ರದೇಶದ ಎಫ್ ಡಿಎ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿವರಣೆ ಕೋರಿ ನೆಸ್ಲೆ ಕಂಪನಿಗೆ ನೋಟಿಸ್ ನೀಡಿದೆ. ಆಹಾರ ಸುರಕ್ಷತಾ ಇಲಾಖೆ ಉಪ ಆಯುಕ್ತ ವಿಜಯ್ ಬಹದೂರ್ ಅವರ ಮ್ಯಾಗಿ ಪರ ಪ್ರಚಾರ ಮಾಡುವ ಎಲ್ಲರ ವಿರುದ್ಧ ನೋಟಿಸ್ ಜಾರಿ ಮಾಡಲು ಮುಂದಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications