ಮುಂಬೈನಲ್ಲಿ ನಟಿಯ ಅಕಾಲಿಕ ಸಾವು, ಹತ್ಯೆ ಶಂಕೆ
ಮುಂಬೈ, ಜೂನ್ 13 : ಬಾಲಿವುಡ್ ಎಂಬ ಮಾಯಾಜಾಲ ಮತ್ತೊಂದು ಬಲಿ ತೆಗೆದುಕೊಂಡಿದೆ. ಪಾತ್ರಗಳಿಗಾಗಿ ಮತ್ತು ದೈನಂದಿನ ಜೀವನಕ್ಕಾಗಿ ಕಷ್ಟಪಡುತ್ತಿದ್ದ ನಟಿಯೊಬ್ಬಳು ಶಂಕಾಸ್ಪದವಾಗಿ ಸಾವಿಗೀಡಾಗಿದ್ದು, ಆಕೆಯ ಮೃತದೇಹ ಸೋಮವಾರ ಮುಂಬೈನಲ್ಲಿ ದೊರೆತಿದೆ.
ಮುಂಬೈನ ಅಂಧೇರಿಯ ಅಪಾರ್ಟಮೆಂಟೊಂದರಲ್ಲಿ 27 ವರ್ಷದ ಕೃತಿಕಾ ಚೌಧರಿಯ ಕೊಳೆತ ದೇಹ ದೊರೆತಿದ್ದು, ಆಕೆಯನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆಕೆಯ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದಂತೆ ಪೊಲೀಸರಿಗೆ ನೆರೆಹೊರೆಯವರು ತಿಳಿಸಿದ್ದಾರೆ.

2013ರಲ್ಲಿ ಬಿಡುಗಡೆಯಾಗಿದ್ದ, ಕಂಗನಾ ರನೌತ್ ಅಭಿನಯದ 'ರಜ್ಜೊ' ಚಿತ್ರದಲ್ಲಿ ಕೃತಿಕಾ ಚೌಧರಿ ನಟಿಸಿದ್ದರು. ಹರಿದ್ವಾರದ ಮೂಲದವರಾದ ಕೃತಿಕಾ ಜೀವನ ಬಂಡಿ ಸಾಗಿಸಲು ಅವರು ಟಿವಿ ಧಾರಾವಾಹಿಗಳಲ್ಲಿ ಕೂಡ ನಟಿಸುತ್ತಿದ್ದರು.
ಮನೆಗೆ ಹೊರಗಿನಿಂದ ಬೀಗ ಹಾಕಿದ್ದರಿಂದ ಮನೆಯ ಬಾಗಿಲು ಮುರಿದು ಪೊಲೀಸರು ಮನೆ ಪ್ರವೇಶಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಬಾಗಿಲು ತೆರೆದಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಆಕೆಯ ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಜೊತೆಯಲ್ಲಿ ಮರಣಪತ್ರ ಕೂಡ ಇಲ್ಲದಿರುವುದು ಶಂಕೆಗೆ ಕಾರಣವಾಗಿದೆ.
ಕೆಲ ತಿಂಗಳ ಹಿಂದೆ ತೆಲುಗಿನ ಖ್ಯಾತ ನಟಿ ಜಯಸುಧಾ ಅವರ ಪತಿ ನಿತಿನ್ ಕಪೂರ್ ಅವರು ಮುಂಬೈನಲ್ಲಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ನಟಿ ಜಿಯಾ ಖಾನ್ ಸಾವು ಕೂಡ ಶಂಕಾಸ್ಪದವಾಗಿತ್ತು. ಕೊನೆಗೆ ಜಿಯಾ ಖಾನ್ ಅವರು ಸತ್ತಿದ್ದು ಆತ್ಮಹತ್ಯೆಯಿಂದಲೇ ಎಂದು ಹೈಕೋರ್ಟ್ ತೀರ್ಪು ನೀಡಿತು.












Click it and Unblock the Notifications