ಮಾರ್ಚ್ 1ರಿಂದ ಬ್ಯಾಂಕ್ ಗಳ ನಗದು ವ್ಯವಹಾರಕ್ಕೆ ಬೀಳುತ್ತೆ ಶುಲ್ಕ!
ಮಾರ್ಚ್ 1ರಿಂದ ನಗದು ವ್ಯವಹಾರಗಳಿಗೆ ಮಿತಿ ವಿಧಿಸಿ, ಆ ನಂತರದ ವ್ಯವಹಾರಗಳಿಗೆ ಬ್ಯಾಂಕ್ ಗಳು ಶುಲ್ಕ ವಿಧಿಸುವ ಸಾಧ್ಯತೆಯಿದೆ. ಈ ಬಗ್ಗೆ ಮಾಹಿತಿ ನೀಡುತ್ತಿದ್ದು, ನಗದುರಹಿತ ವ್ಯವಹಾರ ಉತ್ತೇಜಿಸುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ
ಮುಂಬೈ, ಫೆಬ್ರವರಿ 28: ಮಾರ್ಚ್ 1 ದಿನ ನೆನಪಿಟ್ಟುಕೊಳ್ಳಿ, ಬುಧವಾರ. ಅಂದಿನಿಂದ ಹಲವು ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ವ್ಯವಹಾರದ ಶುಲ್ಕ (ಟ್ರ್ಯಾನ್ಸಾಕ್ಷನ್ ಚಾರ್ಜಸ್) ಹಾಕುವ ಸಾಧ್ಯತೆಯಿವೆ. ನೋಟು ನಿಷೇಧದ ಪರಿಣಾಮ ಎದುರಿಸುತ್ತಿರುವಾಗಲೇ ಬ್ಯಾಂಕ್ ಗಳು ನಗದು ವ್ಯವಹಾರಗಳಿಗೆ ನಿಗದಿತ ಮಿತಿ ವಿಧಿಸಿ, ಆ ಮಿತಿಯನ್ನು ಮೀರಿದ ವ್ಯವಹಾರಗಳಿಗೆ ತಿಂಗಳ ಲೆಕ್ಕದಲ್ಲಿ ಶುಲ್ಕ ವಿಧಿಸುವ ಯೋಚನೆ ಹೊಂದಿವೆ.
ಎಚ್ ಡಿಎಫ್ ಸಿ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆ ಪ್ರಕಾರ ತಿಂಗಳಿಗೆ ನಾಲ್ಕು ನಗದು ವ್ಯವಹಾರ ಮಾತ್ರ ಉಚಿತ. ನಾಲ್ಕು ಅಂದರೆ ಅದರಲ್ಲಿ ಹಣದ ಜಮಾ ಹಾಗೂ ತೆಗೆದುಕೊಳ್ಳೋದು ಎರಡೂ ಸೇರಿರುತ್ತದೆ. ಅದರ ಮೇಲಿನ ನಗದು ವ್ಯವಹಾರಗಳಿಗೆ ಗ್ರಾಹಕರಿಗೆ ಐದರಿಂದ ನೂರೈವತ್ತು ರುಪಾಯಿವರೆಗೆ ಶುಲ್ಕ ವಿಧಿಸಬಹುದಾಗಿದೆ. ನಗದು ವ್ಯವಹಾರ ಯಾವ ಪ್ರಮಾಣದ್ದು ಎಂಬ ಆಧಾರದ ಮೇಲೆ ಶುಲ್ಕ ನಿಗದಿಯಾಗುತ್ತದೆ.[ಸಾವಿರ ರುಪಾಯಿ ನೋಟು ಮತ್ತೆ ಚಲಾವಣೆಗೆ ಬರಲ್ಲ, ಇದು ಅಧಿಕೃತ]

ಇನ್ನು ಗರಿಷ್ಠ ನಗದು ವ್ಯವಹಾರದ ಪ್ರಮಾಣವನ್ನು ತಿಂಗಳಿಗೆ ಪ್ರತಿ ಖಾತೆಗೆ ತಲಾ ಎರಡು ಲಕ್ಷ ರುಪಾಯಿ ಮಿತಿಗೊಳಿಸಲಾಗಿದೆ. ಎರಡು ಲಕ್ಷ ಮೀರಿದ ವ್ಯವಹಾರಕ್ಕೆ ಶುಲ್ಕ ಬೀಳುತ್ತದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ವೇಳೆಯಲ್ಲಿ ನಗದು ವ್ಯವಹಾರಕ್ಕೆ 3 ಲಕ್ಷ ರುಪಾಯಿ ಮಿತಿ ತಂದಾಗಿದೆ.[ಉಳಿತಾಯ ಖಾತೆಯಿಂದ ವಿತ್ ಡ್ರಾ: ರಿಸರ್ವ್ ಬ್ಯಾಂಕ್ ಹೊಸ ನಿಯಮ]
ಆದರೆ, ಆಕ್ಸಿಸ್ ಬ್ಯಾಂಕ್ ನಲ್ಲಿ ವ್ಯವಹಾರದ ಮೇಲಿನ ಮಿತಿಯನ್ನು ಐದಕ್ಕೆ ನಿಗದಿಪಡಿಸಲಾಗಿದೆ ಅಥವಾ ತಿಂಗಳಿಗೆ ಹತ್ತು ಲಕ್ಷ ರುಪಾಯಿವರೆಗೆ ವ್ಯವಹಾರ ಮಾಡಬಹುದು. ಆ ವರೆಗೆ ಯಾವುದೇ ಶುಲ್ಕ ಹಾಕೋದಿಲ್ಲ. ಅದರ ಮೇಲಿನ ವ್ಯವಹಾರಕ್ಕೆ ಇಂತಿಷ್ಟು ಶುಲ್ಕವನ್ನು ಗ್ರಾಹಕರು ಕೊಡಬೇಕಾಗುತ್ತದೆ.
ಇನ್ನು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಒಟ್ಟಾರೆ ನೂರೈವತ್ತು ರುಪಾಯಿ ಅಥವಾ ಪ್ರತಿ ಸಾವಿರ ರುಪಾಯಿಗೆ ಐದು ರುಪಾಯಿ ಶುಲ್ಕ ವಿಧಿಸುವ ಆಲೋಚನೆಯಲ್ಲಿದೆ. ಆದರೆ ನಗದು ವ್ಯವಹಾರದ ವಿಚಾರವಾಗಿ ಯಾವ ಮಿತಿಯನ್ನೂ ತಿಳಿಸಿಲ್ಲ. ಈ ರೀತಿ ಶುಲ್ಕ ವಿಧಿಸಿದರೆ ಡಿಜಿಟಲ್ ಪೇಮಂಟ್ ಕಡೆಗೆ ಜನರು ಮನಸ್ಸು ಮಾಡುತ್ತಾರೆ ಎಂಬುದು ಬ್ಯಾಂಕ್ ಗಳ ನಂಬಿಕೆ.[ನೋಟು ನಿಷೇಧ, ಜಗತ್ತಿನ ಶ್ರೀಮಂತ ದೇಗುಲದ ಆದಾಯ ನಿತ್ಯ 2 ಕೋಟಿ ಖೋತಾ]
ಈ ಎಲ್ಲ ಶುಲ್ಕಗಳು, ಮಿತಿಗಳು ನಗದು ವ್ಯವಹಾರಕ್ಕೆ ಅಷ್ಟೆ. ಚೆಕ್, ಡಿಡಿ ಅಥವಾ ಕಾರ್ಡ್ ಮೂಲಕ ನಡೆಸುವ ವ್ಯವಹಾರಕ್ಕೆ ಅಲ್ಲ ಎಂಬುದು ನೆನಪಿನಲ್ಲಿಡಿ.












Click it and Unblock the Notifications