ಬೇಕಿತ್ತಾ ಇದೆಲ್ಲ! ರೈಲ್ವೇ ಸ್ಟೇಷನ್ ನಲ್ಲಿ ಕಿಕಿ ಡಾನ್ಸ್ ಮಾಡಿದವರ ಪಾಡು ನೋಡಿ!
ಮುಂಬೈ, ಆಗಸ್ಟ್ 10: ಯುವ ಜನಾಂಗದಲ್ಲಿ ವಿಚಿತ್ರ ಕ್ರೇಜ್ ಹುಟ್ಟಿಸಿರುವ ಕಿಕಿ ಡಾನ್ಸ್ ಚಾಲೆಂಜ್ ಅವಾಂತರಕ್ಕೆ ಇಲ್ಲೊಂದು ತಾಜಾ ಉದಾಹರಣೆ! ರೈಲ್ವೇ ಸ್ಟೇಷನ್ ವೊಂದರಲ್ಲಿ ಕಿಕಿ ಡಾನ್ಸ್ ಪ್ರದರ್ಶಿಸುವುದಕ್ಕೆ ಹೋದ ಮೂವರು ಯುವಕರ ಪಾಡು ನೋಡಿದರೆ ನಗಬೇಕೋ, ಅಳಬೇಕೋ ತಿಳಿಯದು!
ಮುಂಬೈಯಲ್ಲಿ ಓಡುತ್ತಿರುವ ಟ್ರೇನಿನ ಮತ್ತು ಅಂಬೆಲೆನ್ಸ್ ನ ಮುಂದೆ ನಿಂತು ಕಿಕಿ ಡಾನ್ಸ್ ಮಾಡಿದ ಮೂವರು ರೈಲ್ವೆ ಸುರಕ್ಷಣಾ ದಳಕ್ಕೆ ಸಿಕ್ಕಿಹಾಕಿಕೊಂಡಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ರೈಲ್ವೇ ಕೋರ್ಟು ಈ ಮೂವರಿಗೂ ನೀಡಿದ ಶಿಕ್ಷೆ ಏನು ಗೊತ್ತಾ? 'ಮೂರು ದಿನಗಳ ಕಾಲ ಮುಂಬೈಯ ವಸಾಯ್ ರೈಲ್ವೇ ನಿಲ್ದಾಣವನ್ನು ಸ್ವಚ್ಛಗೊಳಿಸುವ ಶಿಕ್ಷೆ!'
ಮೂರು ದಿನಗಳ ಕಾಲ ಬೆಳಿಗ್ಗೆ 11 ಗಂಟೆಯಿಂದ 2 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ರೈಲ್ವೇ ನಿಲ್ದಾಣವನ್ನು ಸ್ವಚ್ಛಗೊಳಿಸುವುದಲ್ಲದೆ, ಕಿಕಿ ಡಾನ್ಸ್ ನಂಥ ಅಪಾಯಕಾರಿ ಸ್ಟಂಟ್ ಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಕೋರ್ಟ್ ಆದೇಶ ನೀಡಿದೆ!

ಕೆನಡಾದ ಸಂಗೀತಗಾರ ಡ್ರೇಕ್ ನ ಇತ್ತೀಚೆಗೆ ಬಿಡುಗಡೆ ಮಾಡಿರುವ ಸ್ಕಾರ್ಪಿಯನ್ ಮ್ಯೂಸಿಕ್ ಆಲ್ಬಂನ 'ಇನ್ ಮೈ ಫೀಲಿಂಗ್ಸ್' ಹಾಡು ಬಲು ಜನಪ್ರಿಯವಾಗಿತ್ತು. ಈ ಹಾಡಿಗೆ ಕಾಮಿಡಿಯನ್ ಶಿಗ್ಗಿ ರಸ್ತೆಯಲ್ಲಿ ಡ್ಯಾನ್ಸ್ ಮಾಡಿ ಇನ್‌ಸ್ಟಾಗ್ರಾಂಗೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹಾಡನ್ನೇ ಇಟ್ಟುಕೊಂಡು ಹಲವರು ಕಿಕಿ ಡಾನ್ಸ್ ಮಾಡಿ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.












Click it and Unblock the Notifications