ಮಂಗಳೂರಿನ ಪಬ್‌ನಲ್ಲಿ ದಾಳಿ ಬಗ್ಗೆ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದೇನು?
ಮಂಗಳೂರು, ಜುಲೈ, 26: ಪಬ್ ಮೇಲೆ ಭಜರಂಗದಳ ಕಾರ್ಯಕರ್ತರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನಗರದ ಬಲ್ಮಠದಲ್ಲಿರುವ ರಿಸೈಕಲ್ ಪಬ್‌ಗೆ ಭೇಟಿ ನೀಡಿದ ಕಮೀಷನರ್, ಇದು ಪಬ್ ಅಟ್ಯಾಕ್ ಅಲ್ಲ. ಇಲ್ಲಿ ಯಾವುದೇ ದೈಹಿಕ ಅಟ್ಯಾಕ್‌ಗಳು ನಡೆದಿಲ್ಲ ಎಂದರು.
ಅಪ್ರಾಪ್ತರು ಪಬ್ ಒಳಗೆ ಇರುವ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಒಂದು ಸಂಘಟನೆಯ ಯುವಕರು ಪಬ್ ಮುಂದೆ ಸೇರಿದ್ದರು. ಬಳಿಕ ಪಬ್ ಒಳಗಿದ್ದ ಅಪ್ರಾಪ್ತರನ್ನು ಹೊರಗಡೆ ಕಳುಹಿಸಲಾಗಿದೆ ಎಂದು ಕಮಿಷನರ್ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, "ನಿನ್ನೆ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಒಂದು ಸಂಘಟನೆಗೆ ಸೇರಿದ 10-12 ಯುವಕರು ಬಲ್ಮಠದಲ್ಲಿರುವ ಪಬ್‌ಗೆ ಭೇಟಿ ನೀಡಿದ್ದಾರೆ. ನಂತರ ಇಲ್ಲಿನ ಬೌನ್ಸರ್ ಬಳಿ ಅಪ್ರಾಪ್ತರು ಬಂದು ಸೇರಿದ್ದಾರೆ. ಅವರಿಗೆ ಮದ್ಯವನ್ನು ಕೊಡುತ್ತಿದ್ದೀರಾ. ಸುಮಾರು ಬಾರಿ ಈ ಬಗ್ಗೆ ನಿಮಗೆ ಮನವಿಯನ್ನ ಮಾಡಿದರೂ ಕೂಡ ಮತ್ತೆ ಮದ್ಯ ಕೊಡುತ್ತಾ ಇದ್ದೀರಾ. ಮ್ಯಾನೇಜರ್‌ಗೆ ಹೇಳಿ ಅಪ್ರಾಪ್ತರನ್ನು ಈ ಕೂಡಲೇ ಪಬ್ ನಿಂದ ಹೊರಗೆ ಕಳುಹಿಸಿ ಎಂದು ಹೇಳಿದ್ದಾರೆ. ಬಳಿಕ ಬೌನ್ಸರ್ ಪಬ್‌ನ ಮ್ಯಾನೇಜರ್ ಮೂಲಕ ಅಲ್ಲಿದ್ದ ಗ್ರಾಹಕರ ಐಡಿ ಕಾರ್ಡ್‌ಗಳನ್ನು ಚೆಕ್ ಮಾಡಿ ಅಪ್ರಾಪ್ತರು ಯಾರಿದ್ದಾರೆ ಅವರನ್ನು ಹೊರಗೆ ಕಳುಹಿಸುವ ಕೆಲಸವನ್ನು ಮಾಡಿದ್ದಾರೆ," ಎಂದರು.

ಈ ವೇಳೆ ಅಲ್ಲಿದ್ದ ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳು ಪಬ್‌ನಿಂದ ಹೊರಗೆ ಹೋಗಿದ್ದಾರೆ. ಕಾರ್ಯಕರ್ತರು ಪಬ್ ಮುಂದೆ ಜಮಾವಣೆ ಆಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದಾರೆ. ಕಾರ್ಯಕರ್ತರು ಬೌನ್ಸರ್ ಬಳಿ ಮಾತನಾಡಿದ್ದಾರೆ. ಇದನ್ನ ಬಿಟ್ಟು ಅವರು ಬೇರೆ ಯಾವ ವರ್ತನೆಯನ್ನು ತೋರಿಸಿಲ್ಲ. ವಿದ್ಯಾರ್ಥಿಗಳು ಮತ್ತು ಯುವಕರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.
ಸಿಸಿ ಕ್ಯಾಮರೆರಾ ಪರಿಶೀಲಿಸುತ್ತೇವೆ:
"ಪಬ್‌ನ ಮಾಲೀಕ ಮುಂಬೈನಲ್ಲಿರುವ ಕಾರಣಕ್ಕಾಗಿ ಸಿಸಿ ಕ್ಯಾಮೆರಾವನ್ನು ಚೆಕ್ ಮಾಡಿಲ್ಲ. ಮಾಲೀಕನ ಬಳಿಯೇ ಅದರ ಪಾಸ್‌ವರ್ಡ್ ಇದೆ. ಮಾಲೀಕರನ್ನು ಸಂಪರ್ಕ ಮಾಡಿ ಸಿಸಿ ಕ್ಯಾಮೆರಾದ ಪಾಸ್‌ವರ್ಡ್ ಪಡೆದು ವಿಚಾರಣೆ ಮಾಡುತ್ತೇವೆ. ಪಬ್‌ಗೆ ಬಂದ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ಥಳೀಯ ಕಾಲೇಜಿನವರು. ಕಾಲೇಜಿನ ಆಡಳಿತ ಮಂಡಳಿಯನ್ನೂ ಸಂಪರ್ಕ ಮಾಡಿ ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯನ್ನು ಪಡೆದಿದ್ದೇವೆ. ವಿದ್ಯಾರ್ಥಿಗಳ ಪೋನ್ ನಂಬರ್‌ಗಳನ್ನು ಪಡೆದು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ. ಅಪ್ರಾಪ್ತರಿಗೂ ಪಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯವನ್ನು ಕೊಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸ್ ಇಲಾಖೆಗೂ ಬಂದಿದೆ. ನಾವು ಈ ಬಗ್ಗೆ ಪರಿಶೀಲನೆಗೆ ಮುಂದಾಗಿದ್ದೇವೆ. ಇತ್ತೀಚೆಗೆ ಪಬ್‌ವೊಂದಕ್ಕೂ ದಾಳಿ ಮಾಡಿ ಕೇಸ್ ದಾಖಲಿಸಲಾಗಿದೆ," ಎಂದು ಹೇಳಿದರು.

ಮಂಗಳೂರಿನ ಖಾಸಗಿ ಕಾಲೇಜಿನ ಕಿಸ್ಸಿಂಗ್ ಪ್ರಕರಣದ ವಿದ್ಯಾರ್ಥಿಗಳಿಗೂ ಇಲ್ಲಿ ಬಂದಿರುವ ವಿದ್ಯಾರ್ಥಿಗಳಿಗೂ ಯಾವುದೇ ಸಂಬಂಧ ಇಲ್ಲ. ಕಿಸ್ಸಿಂಗ್ ಪ್ರಕರಣದ ವಿದ್ಯಾರ್ಥಿಗಳು ರಿಮೈಂಡ್ ಹೋಂ ಗೆ ಹೋಗುವ ಮುನ್ನ ಪಾರ್ಟಿ ಮಾಡಲು ಪಬ್‌ಗೆ ಹೋಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಮ್ಯಾನೇಜರ್ ವಿದ್ಯಾರ್ಥಿಗಳನ್ನು ಪರಿಶೀಲನೆ ಮಾಡುವಾಗ ನಾವು ತೃತೀಯ ಪದವಿ ವಿದ್ಯಾರ್ಥಿಗಳು ಅಂತ ಹೇಳಿಕೊಂಡಿದ್ದಾರೆ ಎಂದು ಎನ್.ಶಶಿಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಕಿಸ್ಸಿಂಗ್ ಪ್ರಕರಣವೊಂದು ದಾಖಲಾಗಿತ್ತು. ಇದಕ್ಕೂ ಪಬ್ ವಿದ್ಯಾರ್ಥಿಗಳಿಗೂ ಯಾವ ಸಂಬಂಧವಿಲ್ಲ ಎಂದು ಎನ್. ಶಶಿಕುಮಾರ್ ತಿಳಿಸಿದರು.












Click it and Unblock the Notifications