World Cup 2023: ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಹಿಂದೆ ಇದ್ದದ್ದು ಮಂಗಳೂರಿನ ಕುವರಿ
ಮಂಗಳೂರು, ನವೆಂಬರ್ 21: ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ದಿಗ್ವಿಜಯ ಸಾಧಿಸಿದೆ. ಆಸ್ಟ್ರೇಲಿಯಾದ ಸಮತೋಲಿನ ಆಟ ವಿಶ್ವಕಪ್ ಗೆಲ್ಲೋಕೆ ಕಾರಣವಾಗಿದೆ. ಆದರೆ ಆಸ್ಟ್ರೇಲಿಯಾ ಗೆಲುವಿಗೂ ಭಾರತದ ಸಹಕಾರವಿದೆ. ನಮ್ಮ ರಾಜ್ಯದ ಮಂಗಳೂರು ಮೂಲದ ಯುವತಿ ಆಸ್ಟ್ರೇಲಿಯಾ ಕಪ್ ಗೆಲ್ಲೋಕೆ ಕಾರಣವಾಗಿದ್ದಾರೆ.
ಆಸ್ಟ್ರೇಲಿಯಾ ತಂಡ ಮ್ಯಾನೇಜರ್ ಆಗಿ ಮಂಗಳೂರು ಮೂಲದ ಯುವತಿ ಕಾರ್ಯನಿರ್ವಹಿಸಿದ್ದು, ಕಪ್ ಗೆಲ್ಲೋಕೆ ಕಾಂಗಾರೂ ಪಡೆಯನ್ನು ಹುರಿದುಂಬಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಆಗಿ ಮುವತ್ತನಾಲ್ಕು ಹರೆಯದ ಮಂಗಳೂರು ಮೂಲದ ಉರ್ಮಿಳಾ ರೊಸಾರಿಯೋ ಕಾರ್ಯನಿರ್ವಹಿಸುತ್ತಿದ್ದಾರೆ.

ಮೂಲತಃ ಮಂಗಳೂರಿನ ಕಿನ್ನಿಗೋಳಿಯವರಾಗಿರುವ ಐವಿ ಮತ್ತು ವಾಲೆಂಟೈನ್ ದಂಪತಿಯ ಪುತ್ರಿಯಾಗಿರುವ ಊರ್ಮಿಳಾ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಕ್ರಿಕೆಟ್ ಆಟಗಾರರ ಕೇರ್ ಟೇಕರ್ ಆಗಿದ್ದಾರೆ. ಉರ್ಮಿಳಾ ಅವರ ಹೆತ್ತವರು ಮೂಲತಃ ಕಿನ್ನಿಗೋಳಿಯವರಾಗಿದ್ದರೂ, ಉದ್ಯೋಗದ ನಿಮಿತ್ತ ದೋಹಾ ಕತಾರ್‌ನಲ್ಲಿ ವಾಸ್ತವ್ಯವಾಗಿದ್ದರು.
ಉರ್ಮಿಳಾ ಅವರ ಜನನವಾಗಿದ್ದು ಕೂಡಾ ಕತಾರ್‌ನಲ್ಲಿಯೇ ಬಾಲ್ಯದಿಂದಲೇ ಕ್ರೀಡೆ ಬಗ್ಗೆ ಅಪರಿಮಿತ ಆಸಕ್ತಿ ಹೊಂದಿದ್ದ ಉರ್ಮಿಳಾ ಮೊದಲು ಕತಾರ್ ಟೆನ್ನಿಸ್ ಫೆಡೆರೇಶನ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಆಸ್ಟ್ರೇಲಿಯಾದಲ್ಲಿ ಅಡಿಟೇಲ್ ಕ್ರಿಕೆಟ್ ಟೀಂನಲ್ಲಿ ಮೂರು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು.
ಬಳಿಕ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಟೀಂ ಮ್ಯಾನೇಜರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಈ ಸಂಧರ್ಭದಲ್ಲಿ ಕತಾರ್‌ನಲ್ಲಿ ವಿಶ್ವ ಫುಟ್ಬಾಲ್ ಸಂಧರ್ಭದಲ್ಲಿ ಕತಾರ್‌ನಲ್ಲಿ ನಾಲ್ಕು ತಿಂಗಳ ಕಾಲ ಸೇವೆ ಸಲ್ಲಿಸಿದ್ದರು. ಅಪಾರ ಅನುಭವದೊಂದಿಗೆ ಮತ್ತೆ ಆಸ್ಟ್ರೇಲಿಯಾಗೆ ಮರಳಿದ ಉರ್ಮಿಳಾ ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೇರ್ ಟೇಕರ್ ಆಗಿದ್ದಾರೆ.
ಉರ್ಮಿಳಾ ಅವರ ಹೆತ್ತವರು ಕಳೆದ ಏಳು ವರ್ಷದಿಂದ ಸಕಲೇಶಪುರದಲ್ಲಿ ನೆಲೆಸಿದ್ದು ಎಸ್ಟೇಟ್ ಖರೀದಿಸಿ ವಾಸ್ತವ್ಯ ಹೊಂದಿದ್ದಾರೆ. ಮಗಳ ಸಾಧನೆ ಬಗ್ಗೆ ಉರ್ಮಿಳಾ ತಂದೆ ವಾಲೆಂಟೈನ್ ಪ್ರತಿಕ್ರಿಯೆ ನೀಡಿ, ಮಗಳ ಕ್ರೀಡಾ ಜರ್ನಿಯೇ ರೋಚಕವಾಗಿದೆ. ಉರ್ಮಿಳಾಗೆ ಬಾಲ್ಯದಲ್ಲಿ ಬಾಸ್ಕೆಟ್‌ಬಾಲ್, ಟೆನ್ನಿಸ್, ಸೇರಿದಂತೆ ಅಥ್ಲೆಟಿಕ್ ಮೇಲೆ ಆಸಕ್ತಿ ಇತ್ತು. ಬಳಿಕ ಆ ಆಸಕ್ತಿ ಕ್ರಿಕೆಟ್ ಮೇಲೆ ಹೊರಳಿತು. ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದೊಂದಿಗೆ ಉರ್ಮಿಳಾ ಸಂಬಂಧ ಬಹಳ ಚೆನ್ನಾಗಿತ್ತು.

ಆಸ್ಟ್ರೇಲಿಯಾ ಮೂಲದವರಾಗದಿದ್ದರೂ ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ನಾಲ್ಕು ವರ್ಷಗಳ ಕಾಲ ಕೇರ್ ಟೇಕರ್ ಆಗಿದ್ದಳು. ಉರ್ಮಿಳಾ ಎಲ್ಲಾ ಭಾಷೆಗಳನ್ನು ಬಲ್ಲವಳಾಗಿದ್ದರಿಂದ ಆಟಗಾರರು ಹೋಗುವ ದೇಶದಲ್ಲಿ ಆಟಗಾರರ ಊಟೋಪಚಾರ, ವಸತಿ ಎಲ್ಲವನ್ನೂ ನಿಭಾಯಿಸುತ್ತಾಳೆ. ಮತ್ತು ಅವಳ ಕೆಳಗೆ ದೊಡ್ಡ ತಂಡವೇ ಕಾರ್ಯ ನಿರ್ವಹಿಸುತ್ತಿದೆ. ಮಗಳ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದು ಕೊಂಡಾಡಿದ್ದಾರೆ.
ಇನ್ನು ಉರ್ಮಿಳಾ ತಾಯಿ ಐವಿ ಮಾತನಾಡಿ, ಕಳೆದ ಮಾರ್ಚ್ ನಲ್ಲಿ ಸಕಲೇಶಪುರದ ಎಸ್ಟೇಟ್‌ಗೆ ಉರ್ಮಿಳಾ ಬಂದಿದ್ದಳು. ಉರ್ಮಿಳಾಗೆ ಕನ್ನಡ, ಇಂಗ್ಲಿಷ್, ಹಿಂದಿ, ಕೊಂಕಣಿ ಭಾಷೆಗಳ ಹಿಡಿತವಿದೆ. ವಿಶ್ವಕಪ್ ಸಂಧರ್ಭದಲ್ಲಿ ಬೆಂಗಳೂರು ಮತ್ತು ಪುಣೆಯಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಿದ್ದೇವೆ. ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮಗಳು ಅಹ್ವಾನಿಸಿದ್ದಳು. ಆದರೆ ಎಸ್ಟೇಟ್ ಕಾರ್ಯ ನಿಮಿತ್ತ ಹೋಗಲು ಸಾಧ್ಯವಾಗಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications