ಮಂಗಳೂರಿನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ, ಲಕ್ಷಾಂತರ ರೂ.ನಗದು ವಶ
ಮಂಗಳೂರು, ಏಪ್ರಿಲ್ 10: ಐಪಿಎಲ್ ಕ್ರಿಕೆಟ್ ಪಂದ್ಯಾಟಗಳು ಆರಂಭವಾಗುತ್ತಿದ್ದಂತೆ ಬೆಟ್ಟಿಂಗ್ ದಂಧೆ ಕೂಡ ಜೋರಾಗಿ ನಡೆಯಲಾರಂಭಿಸಿದೆ. ಮಂಗಳೂರಿನಲ್ಲಿ ಸಿಸಿಬಿ ಪೊಲೀಸರ ತಂಡ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿ 3 ಮಂದಿ ಆರೋಪಿಗಳನ್ನು ಬಂಧಿಸಿದೆ.
ನಗರದ ಮಠದಕಣಿಯಲ್ಲಿ ಮೊಬೈಲ್ ಆಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವರ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಮಠದಕಣಿ ನಿವಾಸಿಗಳಾದ ಸುನಿಲ್ ಮೆಲ್ವಿನ್ ರೇಗೋ (42), ಸಂತೋಷ್ ಜಾನ್ (47) ಹಾಗೂ ಉಳ್ಳಾಲಬೈಲು ನಿವಾಸಿ ಅಶೋಕ್ ಅಂಚನ್ (46) ಎಂದು ಗುರುತಿಸಲಾಗಿದೆ.

ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ ದಂಧೆಗಾಗಿ 'ಬೆಟ್‌ಪ್ರೊ' ಮೊಬೈಲ್ ಆಪ್ ಡೌನ್‌ಲೋಡ್ ಮಾಡಿದ ಗ್ರಾಹಕರಿಗೆ ಹಣವನ್ನು ರಿಚಾರ್ಜ್ ಮಾಡುವುದು ಹಾಗೂ ಪಾಸ್‌ವರ್ಡ್‌ಗಾಗಿ ಹಣವನ್ನು ಸಂಗ್ರಹಿಸುತ್ತಿದ್ದರು.
ನಂತರ ವಿದೇಶದಲ್ಲಿರುವ ಅರುಣ್ ಮೊಂತೆರೋ ಹಾಗೂ ಕಿರಣ್ ಎಂಬುವವರಿಗೆ ಹಣವನ್ನು ಸಂದಾಯ ಮಾಡಿದಾಗ ಅವರು ಆಪ್ ನ ಪಾಸ್‌ವರ್ಡ್‌ನ್ನು ಗ್ರಾಹಕರಿಗೆ ನೀಡುತ್ತಿದ್ದರು ಎಂದು ಹೇಳಲಾಗಿದೆ.

ಈ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕೃತ್ಯದಲ್ಲಿ ಇನ್ನೂ ಇತರರು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರಿಂದ 4.25 ಲಕ್ಷ ರೂಪಾಯಿ ನಗದು ಮತ್ತು ಐದು ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಕ್ರಿಕೆಟ್ ಬೆಟ್ಟಿಗ್ ದಂಧೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ ಪೊಲೀಸರು 20 ಮಂದಿಯನ್ನು ಬಂಧಿಸಿದ್ದಾರೆ.












Click it and Unblock the Notifications