Lok Sabha Election 2024: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಮಗ್ರ ಪರಿಚಯ
ಮಂಗಳೂರು, ಮಾರ್ಚ್ 20: ಒಂದು ಕಡೆ ಕಡಲ ತೀರ ಮತ್ತೊಂದು ಕಡೆ ಪಶ್ಚಿಮ ಘಟ್ಟ ನಡುವಿನ ಕ್ಷೇತ್ರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ. ಅತ್ಯಂತ ಸಂಪತ್ತು ಭರಿತ ಮತ್ತು ರಾಜ್ಯಕ್ಕೆ ಎರಡನೇ ಅತಿ ಹೆಚ್ಚು ಆದಾಯವನ್ನು ತಂದು ಕೊಡುವ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ.
1951 ರಿಂದ 2019 ರವರೆಗೆ ಒಟ್ಟು 16 ಚುನಾವಣೆಗಳು ಈ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿಯವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಎಂಟು ಬಾರಿ ಬಿಜೆಪಿ ಅಭ್ಯರ್ಥಿ ಗೆಲುವನ್ನು ಸಾಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಒಂಬತ್ತು ಬಾರಿ ಈ ಕ್ಷೇತ್ರದಿಂದ ಗೆಲುವನ್ನು ಸಾಧಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಕಾಂಗ್ರೆಸ್ ನಿಂದ ಮತ್ತು ಬಿಜೆಪಿಯಿಂದ ಧನಂಜಯ ಕುಮಾರ್ ಸತತ ನಾಲ್ಕು ಬಾರಿ ಗೆದ್ದ ಕ್ಷೇತ್ರ. ಈ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಇಬ್ಬರು ಅಭ್ಯರ್ಥಿಗಳು ಕೇಂದ್ರದಲ್ಲಿ ಸಚಿವರಾಗಿದ್ದ ದಾಖಲೆಯು ಇದೆ. ಜೊತೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಎರಡು ಸಿಎಂ ಗಳನ್ನು ಕೊಟ್ಟ ಕ್ಷೇತ್ರವಾಗಿದೆ.
1951ರಲ್ಲಿ ಪ್ರಥಮ ಲೋಕಸಭಾ ಚುನಾವಣೆ ನಡೆದಾಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಸೌತ್ ಕೆನಾರಾ ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಎರಡನೇ ಬಾರಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಜಿಲ್ಲೆ ಜೊತೆ ಕೊಡಗು ಸೇರಿಕೊಂಡು ಈ ಕ್ಷೇತ್ರವನ್ನು ಅಂದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು.
1957 ರಿಂದ 2009 ರವರಗೆ ಕೊಡಗು ಮತ್ತು ದಕ್ಷಿಣ ಕನ್ನಡ ಒಂದೇ ಲೋಕಸಭಾ ಕ್ಷೇತ್ರ ಆಗಿತ್ತು. 2009 ರಲ್ಲಿ ಕ್ಷೇತ್ರ ವಿಭಾಜನೆಯಾದ ಬಳಿಕ ಕೊಡಗು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಹೋಗಿ ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವಾಯಿತು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ರಾಜಕೀಯ ಇತಿಹಾಸ
ಆ ಒಂದು ಸಮಯದಲ್ಲಿ ಚುನಾವಣೆ ನಡೆದಾಗ ಅತೀ ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸುತ್ತಿತ್ತು. ಅದೇ ಸಮಯದಲ್ಲಿ ಎರಡನೇ ಅತೀ ಹೆಚ್ಚು ಮತವನ್ನು ಪಡೆಯುತ್ತಿದ್ದ ಪಕ್ಷ ಸಿಪಿಐ. 1977 ರಲ್ಲಿ ಅಂದರೆ ತುರ್ತು ಪರಿಸ್ಥಿತಿಯ ನಂತರ ಇಡೀ ದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದರು ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದ್ದು ಮಾಜಿ ಸಚಿವ ಜನಾರ್ಧನ ಪೂಜಾರಿ ಎಂಬುವುದು ದಾಖಲೆ. ಅದರ ನಂತರ ಸತತ ನಾಲ್ಕು ಬಾರಿ ಜನಾರ್ಧನ ಪೂಜಾರಿ ಈ ಕ್ಷೇತ್ರದಿಂದ ಗೆದ್ದಿದ್ದಾರೆ.
1991ರಿಂದ ಕಾಂಗ್ರೆಸ್‌ನ ಅವನತಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಆರಂಭ ಆಯಿತು. 1991ರಲ್ಲಿ ಪ್ರಥಮ ಬಾರಿಗೆ ಬಿಜೆಪಿಯಿಂದ ಧನಂಜಯ ಕುಮಾರ್ ಗೆಲುವು ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು, ಅದರ ಬಳಿಕ ಸತತ ನಾಲ್ಕು ಬಾರಿ ಧನಂಜಯ ಕುಮಾರ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. 2004ರಲ್ಲಿ ಡಿ.ವಿ ಸದಾನಂದ ಗೌಡ ಮೊದಲ ಬಾರಿಗೆ ಲೋಕಸಭೆಗೆ ಇದೇ ಕ್ಷೇತ್ರದಿಂದ ಆಯ್ಕೆ ಆಗಿದ್ದರು.
2009 ರಿಂದ ನಳಿನ್ ಕುಮಾರ್ ಕಟೀಲ್ ಈ ಕ್ಷೇತ್ರದಿಂದ ಸತತ ಗೆಲುವನ್ನು ಸಾಧಿಸುತ್ತ ಬಂದು, 2019ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವನ್ನು ಈ ಕ್ಷೇತ್ರ ದಿಂದಗಳಿಸಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ನಳೀನ್ ಕುಮಾರ್ ಕಟೀಲ್ ಬದಲು ಕ್ಯಾಪ್ಟನ್ ಬ್ರಿಜೇಶ್ ಚೌಟ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್‌ನಿಂದ ಈವರೆಗೂ ಅಭ್ಯರ್ಥಿಯ ಘೋಷಣೆಯಾಗಿಲ್ಲ.

ದಕ್ಷಿಣ ಕನ್ನಡ ಮತದಾರರ ವಿವರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 17,96,826 ಮತದಾರರಿದ್ದು, ಇದರಲ್ಲಿ 8,77,438 ಮಂದಿ ಪುರುಷ ಮತ್ತು 9,19,321 ಮಂದಿ ಮಹಿಳಾ ಮತದಾರರು ಹಾಗೂ 67 ಮಂದಿ ತೃತೀಯ ಲಿಂಗಿಗಳು ಇದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 35,689 ಯುವ ಮತದಾರು ನೋಂದಣಿ ಮಾಡಿಸಿದ್ದು, 18,310 ಯುವಕರು ಮತ್ತು 17,376 ಯುವತಿಯರು. 3 ಮಂದಿ ಲಿಂಗತ್ವ ಅಲ್ಪ ಸಂಖ್ಯಾತರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ.
ಹಿರಿಯ ಮತದಾರರ ಪೈಕಿ 85 ವರ್ಷ ಮೇಲ್ಪಟ್ಟವರು 13,159, 90 ವರ್ಷ ಮೇಲ್ಪಟ್ಟವರು 8,269, ಶತಾಯುಷಿಗಳು 459, ಒಟ್ಟು 21,887 ಹಾಗೂ 14,195 ಅಂಗವಿಕಲ ಮತದಾರರಿದ್ದಾರೆ. 85 ವರ್ಷ ಮೇಲ್ಪಟ್ಟವರಿಗೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಮಾದರಿಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡುವ ಅವಕಾಶವಿದೆ
ಬೆಳ್ತಂಗಡಿ 241, ಮೂಡುಬಿದಿರೆ 219, ಮಂಗಳೂರು ನಗರ ಉತ್ತರ 254, ಮಂಗಳೂರು ನಗರ ದಕ್ಷಿಣ 249, ಮಂಗಳೂರು 210, ಬಂಟ್ವಾಳ 249, ಪುತ್ತೂರು 221, ಸುಳ್ಯ 233 ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1876 ಮತಗಟ್ಟೆಗಳಿವೆ.












Click it and Unblock the Notifications