ಮಹಿಳಾ ಎಸ್ ಪಿಜಿ ಕಮಾಂಡೊ ಭದ್ರತೆಯಲ್ಲಿ ಮೋದಿ ಭಾಷಣ
ಮಂಗಳೂರು, ಮೇ 5: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಶನಿವಾರ ಮಂಗಳೂರಿಗೂ ಆಗಮಿಸಿದ್ದ ಮೋದಿ ನಗರದ ಕೇಂದ್ರ ಮೈದಾನದಲ್ಲಿ ಅಯೋಜಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿ ಪಾಲ್ಗೊಂಡಿದ್ದ ಬೃಹತ್ ಸಮಾವೇಸದಲ್ಲಿ ಮೋದಿ ಅವರ ವಿಶೇಷ ಭದ್ರತಾ ಪಡೆಯ ಮಹಿಳಾ ಕಮಾಂಡೋ ಒಬ್ಬರು ಇಡೀ ಸಮಾವೇಶದಲ್ಲಿ ಗಮನ ಸೆಳೆದರು.
ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನಲೆಯಲ್ಲಿ ಮಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿಶೇಷ ಭದ್ರತಾ ಪಡೆಯ ನೇತೃತ್ವದಲ್ಲಿ ಸಮಾವೇಶ ನಡೆಯುವ ಸ್ಥಳದ ಸುತ್ತ ಹದ್ದಿನ ಕಣ್ಣಿರಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ಹೊಣೆ ಹೊತ್ತಿರುವ ವಿಶೇಷ ಭದ್ರತಾ ಪಡೆ (ಎಸ್ ಪಿಜಿ) ಯ ಮಹಿಳಾ ಕಮಾಂಡೊ ಒಬ್ಬರು ಬಿಜೆಪಿಯ ಸಮಾವೇಶದಲ್ಲಿ ಗಮನ ಸೆಳೆದರು. ಗಂಭೀರವಾಗಿ ಅತ್ಯಾಧುನಿಕ ಅಸಾಲ್ಟ್ ರೈಫಲ್ ಹಿಡಿದು ಸಮಾವೇಶದ ಸ್ಟೇಜ್ ಕೆಳ ಭಾಗದಲ್ಲಿ ನಿಂತಿರುವ ಮಹಿಳಾ ಕಮಾಂಡೊ ಅವರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನಮಂತ್ರಿ ಮೋದಿ ಅವರಿಗೆ ಮಹಿಳಾ ಎಸ್ ಪಿಜಿ ಕಮಾಂಡೊ ಒಬ್ಬರನ್ನು ಭದ್ರತೆಗೆ ನಿಯೋಜಿಸಿರುವುದು ಜನರ ಗಮನ ಸೆಳೆದಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಪ್ರಧಾನಿಯೊಬ್ಬರ ರಕ್ಷಣಾ ಕವಚದ ಜವಾಬ್ದಾರಿಯಲ್ಲಿ ಮಹಿಳಾ ಕಮಾಂಡೋ ಪಾಲು ಪಡೆದಿರುವುದು ಮಹಿಳೆಯರ ಸಾಮರ್ಥ್ಯಕ್ಕೆ ಹಿಡಿದ ಕೈ ಗನ್ನಡಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.












Click it and Unblock the Notifications