2nd PUC Results 2025: ರಾಜ್ಯಕ್ಕೆ ಪ್ರಥಮ: ಅಮೂಲ್ಯ ಕಾಮತ್ ಧನ್ಯವಾದ ಹೇಳಿದ್ದು ಯಾರಿಗೆ?
ಮಂಗಳೂರು, ಏಪ್ರಿಲ್ 08: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಎಕ್ಸ್‌ಪರ್ಟ್ ಪಿಯುಸಿ ಕಾಲೇಜು ಮಂಗಳೂರಿನ ಅಮೂಲ್ಯ ಕಾಮತ್ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಖುಷಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿರುವ ಅಮೂಲ್ಯ ಕಾಮತ್ ತಮ್ಮ ಪ್ರಾಧ್ಯಾಪಕರಿಗೆ ಧನ್ಯವಾದ ಹೇಳಿದ್ದಾರೆ.
'ನನ್ನ ಕಾಲೇಜಿನಲ್ಲಿ ತುಂಬಾ ಬೆಂಬಲ ನೀಡುತ್ತಿದ್ದರು. ಅವರು ಮೊದಲೇ ಅಷ್ಟು ಪರೀಕ್ಷೆ, ಕಾಲೇಜು ಟೆಸ್ಟ್, ಬೋರ್ಡ್ ಟೆಸ್ಟ್‌ಗಳನ್ನು ಕೊಟ್ಟು ನನ್ನನ್ನು ಈ ಮಟ್ಟಕ್ಕೆ ಸಂಪೂರ್ಣ ತಯಾರಿ ಮಾಡಿದ್ದರು. ಅವರು ನನ್ನನ್ನು ತುಂಬಾ ಉತ್ತಮವಾಗಿ ಪರೀಕ್ಷೆಗೆ ತಯಾರಿ ಮಾಡಿದ್ದರು. ಎಲ್ಲವೂ ನನ್ನ ಪ್ರಾಧ್ಯಾಪಕರ ಪ್ರಯತ್ನ. ಸಂಪೂರ್ಣ ವರ್ಷ ಅವರು ನನ್ನ ಮೇಲೆ ಈ ನಂಬಿಕೆ ಇಟ್ಟಿದ್ದರು. ನನ್ನ ಇಂದಿನ ಸಾಧನೆಯ ಎಲ್ಲಾ ಹೊಗಳಿಕೆಯೂ ಅವರಿಗೆ ಹೋಗುತ್ತದೆ' ಎಂದರು.

'ಪ್ರತಿ ದಿನ ಸಂಜೆ ಏಳು ಗಂಟೆಯವರೆಗೆ ತರಗತಿ ಇರುತ್ತಿತ್ತು. ಅದಾದ ಮೇಲೆ ಆ ದಿನದ ಪಾಠಗಳನ್ನು ಅವತ್ತೇ ಓದುತ್ತಿದ್ದೆ. ನನ್ನ ಪ್ರಯತ್ನವನ್ನು ನಾನು ಸಂಪೂರ್ಣವಾಗಿ ಮಾಡಿದ್ದೇನೆ. ಜೊತೆಗೆ ನನ್ನ ಅಪ್ಪ ಅಮ್ಮ ತುಂಬಾ ಬೆಂಬಲ ನೀಡಿದ್ದಾರೆ. ನನ್ನ ಪ್ರಯತ್ನದ ಮಧ್ಯೆ ಬಂದ ಎಲ್ಲಾ ಸಂದರ್ಭಗಳನ್ನು ಬಹಳ ತಾಳ್ಮೆಯಿಂದ ನಿರ್ವಹಿಸಿದ್ದಾರೆ. ನನ್ನ ಅಕ್ಕ ತುಂಬಾ ಬೆಂಬಲ ಕೊಟ್ಟಿದ್ದಾಳೆ. ಅವಳು ಇಲ್ಲದೇ ಇದ್ದಿದ್ದರೆ ನಾನಿಲ್ಲಿ ಇರಲು ಸಾಧ್ಯವೇ ಇರುತ್ತಿರಲಿಲ್ಲ' ಎಂದು ಅಮೂಲ್ಯ ಕಾಮತ್ ಹೇಳಿದ್ದಾರೆ.
ಅಲ್ಲದೇ ಮುಂದಿನ ದಿನಗಳಲ್ಲಿ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಕೆಲವು ಸಲಹೆಗಳನ್ನು ನೀಡಿದ ಅಮೂಲ್ಯ ಕಾಮತ್, 'ನಿಮ್ಮ ಪ್ರಯತ್ನ ನೀವು ಮಾಡಿ ಅಷ್ಟೇ. ಜಾಸ್ತಿ ಒತ್ತಡ ತೆಗೆದುಕೊಳ್ಳಬೇಡಿ. ಎಲ್ಲಾ ಪರೀಕ್ಷೆಗೂ ತಯಾರಾಗಿ ನಿಮ್ಮಿಂದ ಆದಷ್ಟು ಪ್ರಯತ್ನ ಹಾಕಿ' ಎಂದು ಟಿವಿ 9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಇನ್ನು ಮಗಳು ರಾಜ್ಯಕ್ಕೆ ಪ್ರಥಮ ಬಂದ ಖುಷಿಯನ್ನು ಹಂಚಿಕೊಂಡ ಅಮೂಲ್ಯ ಕಾಮತ್ ತಾಯಿ, 'ನಾನು-ನನ್ನ ಪತಿ ಇಬ್ಬರೂ ಡಾಕ್ಟರ್. ನಮ್ಮ ಇಬ್ಬರು ಮಕ್ಕಳು ನಮ್ಮ ವೃತ್ತಿ ಕಡೆಗೆ ಆಸಕ್ತಿ ತೋರಿಸಲಿಲ್ಲ. ನಾವು ನಮ್ಮ ಮಕ್ಕಳಿಗೆ ಯಾವುದೇ ರೀತಿಯಾಗಿ ಒತ್ತಡ ಹಾಕಿಲ್ಲ. ನಿಮಗೆ ಯಾವುದು ಇಷ್ಟ, ನಿಮಗೆ ಯಾವುದು ಸಂತೋಷ ಕೊಡುತ್ತದೆ ಅದನ್ನು ಮಾಡಿ ಅಂತಾ ಹೇಳಿದ್ದೇವು. ಅವರ ಕಾಲೇಜಿನ ಲೋಗೋ ಅಂತೆ ಶ್ರಮ ಜಯ ಸಾಧಿಸಿದೆ. ಅವಳ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ ಶಿಕ್ಷಕರು ಕೂಡ ಅಷ್ಟೇ ಪರಿಶ್ರಮ ಪಡುತ್ತಾರೆ' ಎಂದು ಹೇಳಿದರು.












Click it and Unblock the Notifications